ಮೈಸೂರು: ಮೈಸೂರಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದ ಶಂಕುಸ್ಥಾಪನೆ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕಾಂಗ್ರೆಸ್ ಕಚೇರಿಯನ್ನು ದೇಗುಲಕ್ಕೆ ಸಮಾನವೆಂದು ಕರೆದು, ಪಕ್ಷದ ಕಾರ್ಯಕರ್ತರು ಮತ್ತು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಚೇರಿಗಳನ್ನು ನಿರ್ಮಿಸುವ ಮೂಲಕ ಪಕ್ಷಕ್ಕೆ ಕೊಡುಗೆ ನೀಡಬೇಕೆಂದು ಕರೆ ನೀಡಿದರು.
“ಕಾಂಗ್ರೆಸ್ ಕಚೇರಿಯೇ ನಮಗೆ ದೇವಸ್ಥಾನ. ಶಾಸಕರು ಮತ್ತು ಬ್ಲಾಕ್ ಅಧ್ಯಕ್ಷರು ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಚೇರಿಗಳನ್ನು ನಿರ್ಮಿಸಿದಾಗ ಮಾತ್ರ ಪಕ್ಷ ನಿಮಗೆ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಿದ್ದು ಸಾರ್ಥಕವಾಗುತ್ತದೆ. ಇಲ್ಲವಾದರೆ, ಪಕ್ಷಕ್ಕೆ ನಿಮ್ಮ ಕೊಡುಗೆ ಶೂನ್ಯ ಎಂದು ಸಂಕೋಚವಿಲ್ಲದೇ ಹೇಳುತ್ತೇನೆ,” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ರಕ್ಷಾ ಬಂಧನ ಹಬ್ಬ ಮತ್ತು ಕ್ವಿಟ್ ಇಂಡಿಯಾ ದಿನಾಚರಣೆಯ ದಿನವನ್ನು ಉಲ್ಲೇಖಿಸಿದ ಅವರು, “ನಿನ್ನೆ ಈ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದ್ದೆವು. ಆದರೆ, ಇತರ ಕಾರ್ಯಕ್ರಮಗಳ ಕಾರಣದಿಂದ ಇಂದಿಗೆ ಮುಂದೂಡಲಾಯಿತು,” ಎಂದರು.
“ಈ ಕಾಂಗ್ರೆಸ್ ಭವನವು ಕಾರ್ಯಕರ್ತರಿಗೆ ದೇಗುಲವಿದ್ದಂತೆ. ಇದು ಪ್ರಜಾಪ್ರಭುತ್ವವನ್ನು ಉಳಿಸುವ ಸೌಧವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ. ಯತೀಂದ್ರ, ಡಾ. ಎಚ್.ಸಿ. ಮಹದೇವಪ್ಪ ಸೇರಿದಂತೆ ಎಲ್ಲ ಕಾರ್ಯಕರ್ತರು ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಈ ಕಟ್ಟಡ ನಿರ್ಮಾಣಕ್ಕೆ ಸಹಕರಿಸಬೇಕು. 100 ರೂಪಾಯಿಯಿಂದ 1,000 ರೂಪಾಯಿಗಳವರೆಗೆ ಯಾವುದೇ ಕೊಡುಗೆಯಾದರೂ, ಈ ಭವನ ನಿರ್ಮಾಣದಲ್ಲಿ ನಿಮ್ಮ ಪಾಲಿನ ಸೇವೆ ಇದೆ ಎಂಬ ಭಾವನೆ ನಿಮ್ಮಲ್ಲಿ ಇರಬೇಕು,” ಎಂದು ಶಿವಕುಮಾರ್ ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ಶತಮಾನೋತ್ಸವವನ್ನು ಸ್ಮರಿಸುವ ಸಲುವಾಗಿ ರಾಜ್ಯದ 100 ಕಡೆ ಕಾಂಗ್ರೆಸ್ ಕಚೇರಿಗಳನ್ನು ನಿರ್ಮಿಸುವ ಗುರಿಯನ್ನು ಪಕ್ಷ ಹೊಂದಿದೆ ಎಂದ ಅವರು, “ತನ್ವೀರ್ ಸೇಠ್ ಮತ್ತು ತಿವಾರಿ ಅವರ ಮನವಿಯಂತೆ ಈ ಆಸ್ತಿಯನ್ನು ಕಾಂಗ್ರೆಸ್ ಪಕ್ಷಕ್ಕೆ ವರ್ಗಾಯಿಸಲಾಗಿದೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು. ಮಹಾತ್ಮಾ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ನೂರು ವರ್ಷಗಳನ್ನು ಪೂರೈಸಿದ್ದು, ಇಂದು ಆ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದಾರೆ,” ಎಂದರು.
“ಮನುಷ್ಯನ ಜನನ ಆಕಸ್ಮಿಕ, ಮರಣ ಅನಿವಾರ್ಯ. ಈ ಎರಡರ ಮಧ್ಯೆ ನಾವು ಏನು ಸಾಧಿಸುತ್ತೇವೆ ಎಂಬುದು ಮುಖ್ಯ. ಶಾಸಕರಾದ ಧ್ರುವನಾರಾಯಣ, ವೆಂಕಟೇಶ್, ರವಿಶಂಕರ್ ಸೇರಿದಂತೆ ಎಲ್ಲರೂ ತಮ್ಮ ಗುರುತನ್ನು ಬಿಟ್ಟು ಹೋಗಬೇಕು. ದೇವರಾಜ ಅರಸು, ಅಜೀಜ್ ಸೇಠಿ ಅವರನ್ನು ಜನರು ಇಂದಿಗೂ ಸ್ಮರಿಸುವಂತೆ, ನಿಮ್ಮನ್ನೂ ಭವಿಷ್ಯದಲ್ಲಿ ಸ್ಮರಿಸಬೇಕು,” ಎಂದು ಕರೆ ನೀಡಿದರು.
ಮೈಸೂರಿನ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಾ. ಎಚ್.ಸಿ. ಮಹದೇವಪ್ಪನವರೊಂದಿಗೆ ಈ ಹಿಂದೆ ಚರ್ಚೆ ನಡೆಸಿದ್ದಾಗಿ ತಿಳಿಸಿದ ಶಿವಕುಮಾರ್, “ತನ್ವೀರ್ ಸೇಠ್ ಮತ್ತು ಜಿಲ್ಲಾಧ್ಯಕ್ಷರ ಪಕ್ಷ ನಿಷ್ಠೆ, ನಾಯಕತ್ವ ಮತ್ತು ಸಂಘಟನೆಯ ಕೆಲಸ ನನಗೆ ಸಂತೋಷ ತಂದಿದೆ,” ಎಂದರು.
ಇದೇ ವೇಳೆ, ಮದ್ದೂರಿನ ಶಾಸಕ ಉದಯ್, ಎನ್.ಟಿ. ಶ್ರೀನಿವಾಸ್, ರೋಣ ಶಾಸಕರು, ಸಂತೋಷ್ ಲಾಡ್, ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಹಲವರು ತಮ್ಮ ಜಾಗವನ್ನು ಪಕ್ಷಕ್ಕೆ ದಾನ ಮಾಡಿರುವುದನ್ನು ಶಿವಕುಮಾರ್ ಶ್ಲಾಘಿಸಿದರು. “ರಾಮನಗರದಲ್ಲಿ ನಾನು ನಿವೇಶನ ನೀಡಿದ್ದು, ಕಟ್ಟಡ ನಿರ್ಮಾಣವಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ 1 ಕೋಟಿ ರೂ. ಮತ್ತು ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ 1 ಕೋಟಿ ರೂ. ದೇಣಿಗೆ ನೀಡುವ ಭರವಸೆ ನೀಡಿದ್ದಾರೆ. ಇತರ ಶಾಸಕರು ಕೂಡ ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಚೇರಿಗಳಿಗೆ 50 ಲಕ್ಷ ರೂ. ಘೋಷಿಸಿದ್ದಾರೆ,” ಎಂದು ತಿಳಿಸಿದರು.