ಚಿಕ್ಕಬಳ್ಳಾಪುರ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಪ್ರತಾಪ್ ಸಿಂಹ ಪೇಪರ್ ಸಿಂಹನೋ, ಇಲಿನೋ ಗೊತ್ತಿಲ್ಲ, ಆದರೆ ನರಿಯಂತೆ ಮಾತನಾಡುತ್ತಾರೆ” ಎಂದು ಕುಟುಕಿದ ಈಶ್ವರ್, ಅವರ ರಾಜಕೀಯ ವರ್ತನೆಯನ್ನು ಟೀಕಿಸಿದರು.”ಪ್ರತಾಪ್ ಸಿಂಹ ತಾವು ಸಿಂಹನಂತೆ ಘರ್ಜಿಸಬೇಕು, ಬಾಯಿ ಬಡಿದುಕೊಳ್ಳಬಾರದು. ಆದರೆ ಅವರು ಕೇವಲ ಬಾಯಿ ಬಡಿದುಕೊಳ್ಳುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಲಾಡ್ ಮತ್ತು ಪ್ರಿಯಾಂಕ ಖರ್ಗೆ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಬಗ್ಗೆ, “ನಿಮ್ಮದನ್ನು ಬಿಚ್ಚಿಕೊಳ್ಳಿ, ಬಿಚ್ಚಿಡುತ್ತೇನೆ ಎಂದರೆ ನಿಮ್ಮದನ್ನೂ ಬಿಚ್ಚಿಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.ಪ್ರತಾಪ್ ಸಿಂಹ ಅವರಿಗೆ ಬಿಜೆಪಿಯಿಂದ ಟಿಕೆಟ್ ಏಕೆ ಸಿಗಲಿಲ್ಲ ಎಂದು ಪ್ರಶ್ನಿಸಿದ ಈಶ್ವರ್, “ದೇಶದ್ರೋಹಿಗಳಿಗೆ ಸಂಸತ್‌ಗೆ ಪಾಸ್ ಕೊಡುವುದೇಕೆ? ಮೋದಿಯವರ ಬಗ್ಗೆ ಪುಸ್ತಕ ಬರೆದು, ‘ಯಾರು ತುಳಿಯದ ಹಾದಿ’ ಎಂದು ಬರೆದು, ಬಕೀಟು ಹಿಡಿದು ಟಿಕೆಟ್ ಪಡೆದಿದ್ದೀರಿ. ಆದರೆ ಈಗ ಬಿಜೆಪಿ ಹೈಕಮಾಂಡ್ ನಿಮ್ಮನ್ನು ಯಾಕೆ ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ?” ಎಂದು ಕೇಳಿದರು.
ತೇಜಸ್ವಿ ಸೂರ್ಯ ಅವರನ್ನು “ಯುವ ಪ್ರತಿಭೆ” ಎಂದು ಕರೆದಿದ್ದ ಬಿಜೆಪಿ, ಈಗ ಅವರನ್ನು “ಟ್ರಂಪ್ ಕಡೆಗೆ ಹೋಗಿ ಮಂಗಳಾರತಿ ಮಾಡಿಸಿಕೊಂಡವರು” ಎಂದು ವಿಡಂಬನೆ ಮಾಡಿದ ಈಶ್ವರ್, “ವಿಜಯೇಂದ್ರ ಮತ್ತು ಆರ್. ಅಶೋಕ್ ಅವರಿಗೆ ಪ್ರತಾಪ್ ಸಿಂಹ ಕಂಡರೆ ಆಗುವುದಿಲ್ಲ, ಆದರೂ ಅವರನ್ನು ಹತ್ತಿರ ಇಟ್ಟುಕೊಂಡಿದ್ದಾರೆ” ಎಂದರು.ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಎತ್ತಿ ಹಿಡಿದ ಈಶ್ವರ್, “ಸಿದ್ದರಾಮಯ್ಯನವರು ಗತ್ತಿನಿಂದ ಸರ್ಕಾರ ನಡೆಸುತ್ತಿದ್ದಾರೆ. ಕೇಂದ್ರದವರು ಆಹ್ವಾನ ಕೊಡಬೇಕಿತ್ತು. ಆಹ್ವಾನವಿಲ್ಲದೆ ಹೋಗುವವರು ನಾವಲ್ಲ, ನಾವು ಸ್ವಾಭಿಮಾನಿ ಕಾಂಗ್ರೆಸಿಗರು” ಎಂದರು.
ಪ್ರತಾಪ್ ಸಿಂಹ ಅವರು ತಮ್ಮ ಮೇಲೆ ಎರಡು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ತಿಳಿಸಿದ ಈಶ್ವರ್, “ನಾಳೆ ಮತ್ತೊಂದು ಕೇಸ್ ಹಾಕಬಹುದು, ಆದರೆ ನಮ್ಮ ವಕೀಲರು ಉತ್ತರ ಕೊಡುತ್ತಾರೆ. ರಾಜಕೀಯದಲ್ಲಿ ಸಹಿಸಿಕೊಳ್ಳಲು ಆಗದಿದ್ದರೆ ರಾಜಕಾರಣಕ್ಕೆ ಬರಬಾರದು” ಎಂದರು.ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವ ಕುರಿತು, “ಅವರಿಗೆ ಒಳ್ಳೆಯದಾಗಲಿ, ಆದರೆ ಬಿಜೆಪಿ ಈಗಾಗಲೇ ಮೂರು ಭಾಗವಾಗಿದೆ, ಮುಂದೆ ನಾಲ್ಕು ಭಾಗವಾಗಬಹುದು” ಎಂದು ವ್ಯಂಗ್ಯವಾಡಿದರು.