ಮೈಸೂರು: ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಯೋಜನೆಗಳು ಜನರಿಗೆ ಕಾಣುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. “ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಬಿಜೆಪಿ, ಈಗ ಬೇರೆ ರಾಜ್ಯಗಳಲ್ಲಿ ಅವುಗಳನ್ನೇ ನಕಲು ಮಾಡುತ್ತಿದೆ. ವಿರೋಧ ಪಕ್ಷಗಳ ಟೀಕೆಗಳು ಕ್ಷಣಿಕ, ಆದರೆ ನಮ್ಮ ಕೆಲಸ ಶಾಶ್ವತ” ಎಂದು ಅವರು ತಿಳಿಸಿದರು.
ಮೈಸೂರಿನಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್, “ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿಯಾಗಿವೆ. ಇವು ಸುಳ್ಳು, ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಮಂತ್ರಿಗಳಿಂದ ಹಿಡಿದು ಬಿಜೆಪಿ ನಾಯಕರವರೆಗೆ ಟೀಕಿಸಿದರು. ಆದರೆ, ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಹರಿಯಾಣ ಮತ್ತು ಬಿಹಾರದ ಚುನಾವಣೆಗಳಲ್ಲಿ ಬಿಜೆಪಿ ನಮ್ಮ ಗ್ಯಾರಂಟಿ ಯೋಜನೆಗಳನ್ನೇ ನಕಲು ಮಾಡಿದೆ” ಎಂದು ವ್ಯಂಗ್ಯವಾಡಿದರು.
“ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಜನರ ಬದುಕಿಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಐದು ಬೆರಳು ಸೇರಿ ಮುಷ್ಟಿಯಾದಂತೆ, ಐದು ಗ್ಯಾರಂಟಿಗಳು ಜನರ ಬದುಕಿಗೆ ಗಟ್ಟಿತನ ನೀಡಿವೆ” ಎಂದು ಅವರು ಹೇಳಿದರು. “ನಾವು ಜನರಿಂದ ಜೈಕಾರಕ್ಕಾಗಿ ಬಂದಿಲ್ಲ, ಜನರ ಋಣ ತೀರಿಸಲು ಬಂದಿದ್ದೇವೆ. ಸರ್ಕಾರ ಬಂದ ನಂತರ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ತಾಯಿಯ ಪಾದಕ್ಕಿಟ್ಟು ಆಶೀರ್ವಾದ ಪಡೆದೆವು” ಎಂದರು.

ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ತಿರುಗೇಟು
“ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ, ಹಣವಿಲ್ಲ ಎಂದು ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಆದರೆ, ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5,000 ಕೋಟಿ, ಬೀದರ್‌ನಲ್ಲಿ 2,025 ಕೋಟಿ, ಇಂಡಿಯಲ್ಲಿ 3,400 ಕೋಟಿ, ಮೈಸೂರಿನಲ್ಲಿ 2,000 ಕೋಟಿಗೂ ಅಧಿಕ ಮೊತ್ತದ 74 ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. ಮಹದೇಶ್ವರ ಬೆಟ್ಟ, ವಿಜಯನಗರ, ನಂದಿ ಬೆಟ್ಟದಲ್ಲಿ ಸಹ ಸಾವಿರಾರು ಕೋಟಿ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದೇವೆ” ಎಂದು ಶಿವಕುಮಾರ್ ವಿವರಿಸಿದರು.
“ಕಾಂಗ್ರೆಸ್ ಸರ್ಕಾರ ದೇವಾಲಯದಂತೆ. 92 ವರ್ಷಗಳಲ್ಲಿ ಮೊದಲ ಬಾರಿಗೆ ಕಾವೇರಿ ಜೂನ್‌ನಲ್ಲಿ ತುಂಬಿದೆ. ನಾನು ಮತ್ತು ಸಿಎಂ ಕಾವೇರಿ ತಾಯಿಗೆ ಬಾಗಿನ ಅರ್ಪಿಸಿ ಪೂಜಿಸಿದ್ದೇವೆ. ಕಾಂಗ್ರೆಸ್ ಬಂದರೆ ಬರಗಾಲ ಬರುತ್ತದೆ ಎಂಬ ಬಿಜೆಪಿಯ ಅಪಪ್ರಚಾರ ನುಚ್ಚುನೂರಾಗಿದೆ” ಎಂದು ಕುಟುಕಿದರು.
ಹಸ್ತ ಜನರ ಬದುಕಿಗೆ ಆಸರೆ
“ಕಾಂಗ್ರೆಸ್‌ನ ಹಸ್ತ ಚಿಹ್ನೆ ಜನರ ಬದುಕಿಗೆ ಆಸರೆಯಾಗಿದೆ. ರೈತರನ್ನು ಉಳಿಸಿದೆ, ಮಹಿಳೆಯರಿಗೆ ಶಕ್ತಿ ತುಂಬಿದೆ, ಬೆಲೆ ಏರಿಕೆಗೆ ಪರಿಹಾರ ಕೊಟ್ಟಿದೆ. ಪ್ರತಿ ತಿಂಗಳು 5,000 ರೂ. ಆರ್ಥಿಕ ಶಕ್ತಿ ನೀಡುತ್ತಿದೆ” ಎಂದು ಶಿವಕುಮಾರ್ ಹೇಳಿದರು. “ಕಾಂಗ್ರೆಸ್ ಯಾವಾಗಲೂ ರೈತರಿಗೆ ಭೂಮಿ, ಬಡವರಿಗೆ ಮನೆ, ಶಿಕ್ಷಣ, ಆಹಾರ ಭದ್ರತೆ, ಉದ್ಯೋಗ ಖಾತರಿಯಂತಹ ಯೋಜನೆಗಳನ್ನು ಜಾರಿಗೊಳಿಸಿದೆ. ಬಿಜೆಪಿ-ಜೆಡಿಎಸ್‌ಗೆ ಇಂತಹ ಯಾವ ಯೋಜನೆ ತೋರಿಸಲು ಸಾಧ್ಯ?” ಎಂದು ಸವಾಲೆಸೆದರು.
ರಾಹುಲ್ ಗಾಂಧಿಯ ಭಾರತ ಜೋಡೋ ಯಾತ್ರೆಯ ಪರಿಣಾಮ
“ರಾಹುಲ್ ಗಾಂಧಿಯ ಭಾರತ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಕಳೆದ ಉಪಚುನಾವಣೆಯಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಸೋಲಿಸಿದ್ದೇವೆ. 2028ರ ಚುನಾವಣೆಯಲ್ಲಿ ಜನರು ಇನ್ನಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಬೇಕು” ಎಂದು ಮನವಿ ಮಾಡಿದರು.
“ಕಾವೇರಿ ಜಲಾನಯನ ಪ್ರದೇಶಕ್ಕೆ 3,000 ಕೋಟಿ, 2,000 ಕೆಪಿಎಸ್ ಶಾಲೆಗಳ ನಿರ್ಮಾಣಕ್ಕೆ ಕ್ರಾಂತಿಕಾರಿ ಯೋಜನೆ ರೂಪಿಸಿದ್ದೇವೆ. ನಾವು ಭಾವನೆಯ ರಾಜಕೀಯ ಮಾಡುವುದಿಲ್ಲ, ಜನರ ಬದುಕಿನ ರಾಜಕೀಯ ಮಾಡುತ್ತೇವೆ” ಎಂದು ಶಿವಕುಮಾರ್ ಒತ್ತಿ ಹೇಳಿದರು.