ಬಾಳೆಹೊನ್ನೂರು: ಬಾಳೆಹೊನ್ನೂರು ಉಪ ವಿಭಾಗ ವಲಯ ಅರಣ್ಯಾಧಿಕಾರಿಗಳ ಕಚೇರಿ ಬಳಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರ ಸಾವಿಗೆ ಪ್ರತಿಭಟನೆ ನಡೆಯುತ್ತಿದೆ. ಈ ಘಟನೆಯ ಬೆನ್ನಲ್ಲೇ ಜನರ ಆಕ್ರೋಶ ವ್ಯಕ್ತವಾಗಿದ್ದು, ತಕ್ಷಣವೇ ಅರಣ್ಯ ಸಚಿವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಬೇಕೆಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಪಕ್ಷಾತೀತ ಪ್ರತಿಭಟನೆಯಲ್ಲಿ ನಿಖಿಲ್ ಭಾಗಿ:
ಪಕ್ಷಾತೀತವಾಗಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ದು, ಈ ಭಾಗದ ರೈತರು ನಿರಂತರವಾಗಿ ಆನೆ ದಾಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರ ಆರೋಪ ಮಂಡಿಸಿದ್ದಾರೆ. ಅರಣ್ಯ ಸಚಿವರ ಹೇಳಿಕೆಯನ್ನು ಖಂಡಿಸಿರುವ ನಿಖಿಲ್, “ಅರಣ್ಯ ಸಚಿವರಿಗೆ ಬಯಲುಸೀಮೆ ಮತ್ತು ಮಲೆನಾಡು ಭಾಗಗಳ ನಡುವಣ ವ್ಯತ್ಯಾಸ ಗೊತ್ತಿದೆಯೋ ಗೊತ್ತಿಲ್ಲ. ಇಂತಹ ಘಟನೆಗಳು ಇಲ್ಲಿ ಮರುಮರು ಸಂಭವಿಸುತ್ತಿವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರ ಘೋಷಣೆಯ ಆಕ್ಷೇಪ:
ಒಂದೆಡೆ ಸರ್ಕಾರ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದರೂ, ಯಾರೂ ಆ ಪರಿಹಾರವನ್ನು ಅವಲಂಬಿಸಿ ಜೀವನ ನಡೆಸುತ್ತಿಲ್ಲ ಎಂದು ನಿಖಿಲ್ ಆರೋಪಿಸಿದರು. “ಈ ಕೂಡಲೆ ಅರಣ್ಯ ಇಲಾಖೆಯ ಮಂತ್ರಿಗಳು ಸ್ಥಳಕ್ಕೆ ಆಗಮಿಸಿ, ಸ್ಥಳೀಯ ಅರಣ್ಯ ಅಧಿಕಾರಿಗಳು ಮತ್ತು ಸರ್ವಪಕ್ಷದ ಮುಖಂಡರ ಜೊತೆ ಸಭೆ ನಡೆಸಬೇಕು. ಇಲ್ಲಿನ ಸಮಸ್ಯೆಗಳನ್ನು ಅರಿತು ಶಾಶ್ವತ ಪರಿಹಾರ ಘೋಷಿಸಬೇಕು,” ಎಂದು ಒತ್ತಾಯಿಸಿದರು.
ವಿಧಾನಮಂಡಲದಲ್ಲಿ ಗಮನ ಸೆಳೆಯುವ ಭರವಸೆ:
ನಿಖಿಲ್ ಕುಮಾರಸ್ವಾಮಿ ಈ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ಮುಂದುವರಿಸುವುದಾಗಿ ತಿಳಿಸಿದ್ದು, “ಈ ಸಮಸ್ಯೆಯನ್ನು ವಿಧಾನಮಂಡಲದಲ್ಲಿ ಗಮನ ಸೆಳೆಯುವ ಉದ್ದೇಶವಿದೆ,” ಎಂದು ಘೋಷಿಸಿದರು.