ನಾಗರಿಕರು ನೀಡಿರುವ ಸಲಹೆಗಳ ಪೈಕಿ ಕಾನೂನಲ್ಲಿ ಅವಕಾಶವಿರುವ ಅಂಶಗಳನ್ನು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿ ಅಳವಡಿಸಿಕೊಳ್ಳಲಾಗುವುದೆಂದು ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ಶ್ರೀ ರಿಜ್ವಾನ್ ಹರ್ಷದ್ ರವರು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯ ಪೂರ್ವದಲ್ಲಿ ಬಂಜಾರ ಭವಮ ಹಾಗೂ ಮಹದೇವಪುರ ವಲಯದಲ್ಲಿ ನ್ಯೂ ಹೊರೈಝನ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಇಂದು ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯ ಸ್ವೀಕರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಬೆಂಗಳೂರ ನಗರದ ಆಡಳಿತ ವ್ಯವಸ್ಥೆಯ ಕುರಿತು ಪ್ರತಿಯೊಬ್ಬ ಪ್ರಜೆಗೂ ಒಳ್ಳೆಯ ಕಾಳಜಿಯಿದೆ. ಬೆಂಗಳೂರು ದೇಶ ಹಾಗೂ ವಿಶ್ವದಲ್ಲಿಯೇ ಹೆಸರಾಗಿರುವ ನಗರವಾಗಿ ಬೆಳದಿದೆ. ಈ ನಗರದ ಆಡಳಿತ ಉತ್ತಮ ಮಟ್ಟದಲ್ಲಿರಬೇಕು. ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳು ಸುಲಭವಾಗಿ ಸಿಗುವಂತಾಗೇಕೆಂದು ಎಂದು ಹೇಳಿದರು.
ನಗರಲ್ಲಿ ಮೂಲಸೌಕರ್ಯ, ಭವಿಷ್ಯದ ಕಾರ್ಯಕ್ರಮಗಳಲ್ಲಿ ರೋಬೋ ವ್ಯವಸ್ಥೆ ತಯಾರಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಗೇಟ್ರರ್ ಬೆಂಗಳೂರು ಆಡಳಿತ ವಿಧೇಯಕದ ಕಡರನ್ಮು ತಂದಿದ್ದು, ಇದರ ಸಾಧಕ-ಭಾದಕಗಳ ಪರಿಶೀಲನೆಗಾಗಿ ಜಂಟಿ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಈಗಾಗಲೇ 18 ಸಭೆಗಳನ್ನು ಮಾಡಿ ಹಲವಾರು ವಿಷಯಗಳನ್ನು ಕೂಲಂಕುಷವಾಗಿ ಚರ್ಚಿಸಲಾಗಿದೆ. ಎಲ್ಲಾ ವಿಷಯಗಳನ್ನು ಬಹು ಆಯಾಮಗಳಲ್ಲಿ ಚರ್ಚಿಸಿ ವಿಧೇಯಕವನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ವಿಧೇಯಕದ ಕುರಿತು ಸಾರ್ವಜನಿಕರಿಂದಲೂ ಅಭಿಪ್ರಾಯಗಳನ್ನು ಪಡೆದು ಅದನ್ನು ಕೂಡಾ ವಿಧೇಯಕದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ, ವಲಯವಾರು ನಾಗರೀಕರೊಂದಿಗೆ ಸಮಾಲೋಚನೆ/ಅಭಿಪ್ರಾಯ ಸ್ವೀಕಾರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಈಗಾಗಲೇ 870 ಚ.ಕಿ.ಮೀ ವ್ಯಾಪ್ತಿಯಲ್ಲಿ ಬೆಳೆದಿದೆ. ಅದೆಲ್ಲದಕ್ಕೂ ಒಬ್ಬರೇ ಮೇಯರ್, ಒಬ್ಬರೇ ಆಯುಕ್ತರಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಆಡಳಿತದಲ್ಲಿ ಬದಲಾವಣೆ ತಂದು ನಗರವನ್ನು ಪುನರ್ ರಚನೆ ಮಾಡಿದಾಗ ಸಮಸ್ಯೆಗಳನ್ನು ಸಲಭವಾಗಿ ಬಗೆಹರಿಸಬಹುದೆಂದು ತಿಳಿಸಿದರು.
ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಸಂಚಾರ ದಟ್ಟಣೆಯು ಬೇರೆ-ಬೇರೆ ಇಲಾಖೆಗಳಡಿ ಕಾರ್ಯನಿರ್ವಹಿಸುತ್ತಿರುವ ಕಾರಣ ರಸ್ತೆಗಳು ಸರಿಪಡಿಸಿದ ಕೆಲ ದಿನಗಳಲ್ಲಿಯೇ ಅಗೆದು ಬಿಡುತ್ತಾರೆ. ಇಲಾಖೆಗಳ ನಡುವೆ ಸಮನ್ವಯತೆಯಿಲ್ಲದ ಕಾರಣ ನಗರದಲ್ಲಿ ಸಾಕಷ್ಟು ಸಮಸ್ಯೆಗಳು ದಿನೇ ದಿನೆ ಉದ್ಬವಿಸುತ್ತಿವೆ. ನಗರದಲ್ಲಿರುವ ಸಮಸ್ಯೆಗಳನ್ನು ಒಂದೇ ಸ್ಥಳದಲ್ಲಿ ಚರ್ಚಿಸುವ ವೇದಿಕೆಯಿಲ್ಲದಿದ್ದರೆ ಸಾರ್ವಜನಿಕರ ತೆರಿಗೆ ಹಣವೆಲ್ಲಾ ವ್ಯರ್ಥವಾಗುತ್ತದೆ. ಆದ್ದರಿಂದ ಇದಕ್ಕೆ ನೀವುಗಳು ಉತ್ತಮ ಸಲಹೆಗಳನ್ನು ನೀಡಬೇಕೆಂದು ಹೇಳಿದರು.
ಕಾನೂನಲ್ಲಿ ಅವಕಾಶವಿರುವ ಅಂಶಗಳನ್ನು ಅಳವಡಿಸಿಕೊಳ್ಲಲಾಗುವುದು:
ನಾಗರೀಕರು, ಸಂಘ-ಸಂಸ್ಥೆಗಳು ಸಾಕಷ್ಟು ಸಲಹೆಗಳನ್ನು ನೀಡಿದ್ದು, ಕಾನೂನಿನಲ್ಲಿ ಅವಕಾಶವಿರುವ ಅಂಶಗಳನ್ನು ಅಳವಡಿಸಿಕೊಳ್ಳಲಾಗುವುದು. ಹೆಚ್ಚು ಜನಸಂಖ್ಯೆ, ಹೆಚ್ಚು ಸಂಚಾರದಟ್ಟಣೆ ಹೊಂದಿರುವ ನಗರ ಬೆಂಗಳೂರಾಗಿದೆ. ನಗರದ ಆಡಳಿತ ಸ್ವರೂಪವನ್ನು ಮಾರ್ಪಾಡು ಮಾಡಿ ಅದನ್ನು ಅನುಷ್ಠಾನಕ್ಕೆ ತರಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.
ಜಿಬಿಎ ಕುರಿತು ಪ್ರಾತ್ಯಕ್ಷಿಕೆ:
ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ನೀಡಿದ ಪ್ರಾತ್ಯಕ್ಷಿಕೆಯಲ್ಲಿ, ಜಿಬಿಎ ಪ್ರದೇಶ, ಉದ್ದೇಶ, ರಚನೆ, ಆಡಳಿತಾತ್ಮಕ ಕಾರ್ಯಗಳು, ಯೋಜನಾ ಕಾರ್ಯಗಳು, ಜವಾಬ್ದಾರಿಗಳು, ಪ್ರಾಧಿಕಾರಿಗಳು, ಅನುದಾನ, ಜಿಬಿಎ ಸದಸ್ಯರು, ಕಾರ್ಯಕಾರಿ ಸಮಿತಿ, ನಗರ ಪಾಲಿಕೆಗಳು, ನಿಗಮದ ಅಧಿಕಾರಿಗಳು, ನಗರ ಪಾಲಿಕೆಗಳ ಅವಧಿ, ಸ್ಥಾಯಿ ಸಮತಿಗಳು, ಆಸ್ತಿ ನೋಂದಣಿ, ತೆರಿಗೆ, ಕಟ್ಟಡ ಯೋಜನೆಗಳು ಸೇರಿದಂತೆ ಇನ್ನಿತರೆ ವಿಷಯಗಳಲ್ಲಿನ ಮುಖ್ಯಾಂಶಗಳನ್ನು ವಿಸ್ತೃತವಾಗಿ ವಿವರಿಸಿದರು.
ಇ-ಮೇಲ್ ಮೂಲಕ ಸಲಹೆಗಳನ್ನು ನೀಡಿ:
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಸಾರ್ವಜನಿಕರು, ಸಂಘ ಸಂಸ್ಥೆಗಳು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಇ-ಮೇಲ್ ಆದ gbasuggestion@gmail.com ಮೂಲಕವೂ ಕಳುಹಿಸಬಹುದಾಗಿರುತ್ತದೆ.
ಸಾರ್ವಜನಿಕರಿಂದ ಬಂದಂತಹ ಪ್ರಮುಖ ಸಲಹೆಗಳು/ಅಭಿಪ್ರಾಯಗಳು:
- ಜಿಬಿಎ ಅಡಿ ವಿಕೇಂದ್ರಿಕರಣಗೊಳಿಸುವುದರಿಂದ ಗಡಿಗಳಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಲಿವೆ.
- ಗ್ರೇಟರ್ ಬದಲು ಸ್ಥಳೀಯ ಭಾಷೆ ಕನ್ನಡ ಪದ ಬಳಸಲು ಮನವಿ.
- ಜಿಬಿಎಗೆ ಮಹಾಪೌರರನ್ನೇ ಮುಖ್ಯಸ್ಥರನ್ನಾಗಿ ನೇಮಕ ಮಾಡಬೇಕು.
- ನಾಗರೀಕರ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಕೊಟ್ಟು ಸುಲಭ ರೀತಿಯಲ್ಲಿ ಬಗೆಹರಿಸಲು ವ್ಯವಸ್ಥೆ ಮಾಡಬೇಕು.
- ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ವ್ಯವಸ್ಥಿತವಾಗಿ ರೂಪಿಸಿ, ತ್ವರಿತವಾಗಿ ಅನುಷ್ಠಾನಕ್ಕೆ ತರಲು ಮನವಿ.
- ಬಿಬಿಎಂಪಿಗೆ ಈಗಾಗಲೇ 110 ಹಳ್ಳಿಗಳನ್ನು ಸೇರಿಸಿದ್ದು, ಅದಕ್ಕೆ ಸರಿಯಾದ ಅನುದಾನವನ್ನು ಹಂಚಿಕೆ ಮಾಡುತ್ತಿಲ್ಲ. ಆದ್ದರಿಂದ ವಿಧೇಯವನ್ನು ತರುವುದರಿಂದ ಮತ್ತೆ ಸಮಸ್ಯೆಯಾಗಲಿದ್ದು, ಅದನ್ನು ತರವುದು ಬೇಡ.
- ಚುನಾವಣಾ ಅವಧಿ ಮುಗಿದು 5 ವರ್ಷ ಕಳೆಯುತ್ತಾ ಬಂದ ನಂತರ ಜಿಬಿಎ ತರಲು ಮುಂದಾಗಿರುವುದು ಸರಿಯಲ್ಲ. ಆ ವಿಧೇಯಕವನ್ನು ನಿಲ್ಲಿಸಿ ಕೂಡಲೆ ಚುನಾವಣೆ ಮಾಡಿ.
- ವಿಧೇಯಕವನ್ನು 100ಕ್ಕೆ 100 ರಷ್ಟು ಜಾರಿಗೆ ತರಬೇಕು, ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕಾದರೆ ಹೊಸ ಹೊಸ ವಿಧೇಯಕಗಳನ್ನು ತರಬೇಕಿದೆ. ಅದನ್ನು ವ್ಯವಸ್ಥಿತವಾಗಿ ಅನುಷ್ಠಾನ ಆಗಬೇಕು.
- ಬೆಂಗಳೂರನ್ನು ವಿಭಜಿಸಿ ನಗರ ಪಾಲಿಕೆಗಳನ್ನು ಮಾಡುವುದರಿಂದ ಸಾಕಷ್ಟು ಸಮಸ್ಯೆಗಳಾಗಲಿದ್ದು, ಅದನ್ನೆಲ್ಲಾ ಬಿಟ್ಟು ಕೂಡಲೆ ಇರುವ ವ್ಯವಸ್ಥೆಗೆ ಚುನಾವಣೆ ಮಾಡಲು ಮನವಿ.
- ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಕ ಉತ್ತಮ ಆಡಳಿತ ನೀಡಲು ಮನವಿ.
- ಕಾರ್ಪೋರೇಟರ್ ಗಳಿಗೆ ಯಾವುದೇ ಅಧಿಕಾರವಿಲ್ಲ. ತ್ವರಿತವಾಗಿ ಚುನಾವಣೆ ನಡೆಸಲು ಮನವಿ.
- ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಪಾರದರ್ಶಕತೆಯಿಂದ ಮಾಡಲು ಮನವಿ.
- ಗ್ರೇಟರ್ ಬೆಂಗಳೂರು ಜಾರಿಗೆ ತಂದು 5 ನಗರ ಪಾಲಿಕೆಗಳನ್ನು ಮಾಡಿದ ನಂತರ ಚುನಾವಣೆ ಮಾಡಲು ಮನವಿ.
- ಕೆಂಪೇಗೌಡರು ಕಟ್ಟಿದ ನಗರವನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಗ್ರೇಟರ್ ಬೆಂಗಳೂರನ್ನು ಮಾಡದಿರಲು ಮನವಿ.
- ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳನ್ನು ವಾರ್ಡ್ ಸಮಿತಿ ಸಭೆಯಲ್ಲಿ ಇರುವಂತೆ ಮಾಡಬೇಕು.
ಈ ವೇಳೆ ಮಾನ್ಯ ಶಾಸಕರು ಹಾಗೂ ಸಮಿತಿಯ ಸದಸ್ಯರಾದ ಶ್ರೀ ಎಸ್.ಟಿ ಸೋಮಶೇಖರ್, ಶ್ರೀ ಎ.ಸಿ ಶ್ರೀನಿವಾಸ್, ಪ್ರಿಯಕೃಷ್ಣ, ಕೆ.ಆರ್ ಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೈರತಿ ಬಸವರಾಜ್, ವಿಧಾನಪರಿಷತ್ತಿನ ಸದಸ್ಯರರಾದ ನಾಗರಾಜ್ ಯಾದವ್, ವಲಯ ಆಯುಕ್ತರಾದ ಸ್ನೇಹಲ್, ರಮೇಶ್, ಜಂಟಿ ಆಯುಕ್ತರಾದ ಸರೊಜಾ, ಡಾ. ಕೆ. ದಾಕ್ಷಾಯಿಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.