ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಮಧ್ಯಪ್ರವೇಶಿಸುವಂತೆ ಪ್ರತಿಪಕ್ಷ ನಾಯಕ ಆರ್.ಅಶೋಕ ಒತ್ತಾಯಿಸಿದ್ದಾರೆ. ಈ ಸಂಬಂಧ ಆಯೋಗದ ಅಧ್ಯಕ್ಷರಿಗೆ ಅವರು ಪತ್ರ ಬರೆದು, ಪಾರದರ್ಶಕ ತನಿಖೆಗಾಗಿ ಮೇಲ್ವಿಚಾರಣೆ ವಹಿಸುವಂತೆ ಕೋರಿದ್ದಾರೆ.
ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಯುವಕರು ಮೃತಪಟ್ಟಿದ್ದು, 75ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ಕಾರ್ಯಕ್ರಮದ ಕಳಪೆ ನಿರ್ವಹಣೆ ಮತ್ತು ಸೂಕ್ತ ಭದ್ರತಾ ಕ್ರಮಗಳ ಕೊರತೆಯೇ ಕಾರಣ ಎಂದು ಆರ್.ಅಶೋಕ ಆರೋಪಿಸಿದ್ದಾರೆ.
ಕ್ರೀಡಾಂಗಣಕ್ಕೆ 35 ಸಾವಿರ ಜನರಿಗೆ ಮಾತ್ರ ಸೀಮಿತ ಸಾಮರ್ಥ್ಯವಿದ್ದರೂ, ಉಚಿತ ಪಾಸ್‌ಗಳ ವಿತರಣೆ ಮತ್ತು ತಪ್ಪು ಘೋಷಣೆಗಳಿಂದಾಗಿ ಅತಿಯಾದ ಜನಸಂದಣಿ ಉಂಟಾಯಿತು. ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯ ಕೊರತೆ, ಆಂಬ್ಯುಲೆನ್ಸ್, ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳ ಗೈರುಹಾಜರಿಯನ್ನು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ. ಈ ಲೋಪದಲ್ಲಿ ಆರ್‌ಸಿಬಿ, ಡಿಎನ್‌ಎ ಮತ್ತು ಕ್ರಿಕೆಟ್ ಅಸೋಸಿಯೇಶನ್‌ನ ಪಾತ್ರವೂ ಇದೆ ಎಂದು ಆರ್.ಅಶೋಕ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆದರೆ, ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳದಿರುವುದು ಸ್ಪಷ್ಟವಾಗಿದೆ. ಈ ಘಟನೆಯಲ್ಲಿ ಹೆಚ್ಚಿನವರು ಯುವಕರಾಗಿದ್ದು, ಅವರ ಸುರಕ್ಷತೆ ಮತ್ತು ಬದುಕುವ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಆರ್.ಅಶೋಕ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಈ ದುರಂತವನ್ನು ಸ್ವಯಂಪ್ರೇರಿತವಾಗಿ ದೂರಾಗಿ ಪರಿಗಣಿಸಿ, ಸರ್ಕಾರಿ ಇಲಾಖೆಗಳು, ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಗಳ ಜವಾಬ್ದಾರಿಯನ್ನು ತನಿಖೆಯ ಮೂಲಕ ಗುರುತಿಸಬೇಕು ಎಂದು ಅವರು ಕೋರಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡುವ ಜೊತೆಗೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸರ್ಕಾರದ ತನಿಖೆಯು ಪಾರದರ್ಶಕವಾಗಿರಲು ಆಯೋಗದ ಮೇಲ್ವಿಚಾರಣೆ ಅಗತ್ಯವಿದೆ ಎಂದು ಆರ್.ಅಶೋಕ ಒತ್ತಾಯಿಸಿದ್ದಾರೆ. ಈ ದುರಂತವನ್ನು ತಡೆಯಬಹುದಾಗಿತ್ತು ಎಂದಿರುವ ಅವರು, ಆಯೋಗದ ಮಧ್ಯಪ್ರವೇಶದಿಂದ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗಲಿದೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಬಹುದು ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ.