ಮಂಡ್ಯ: ಕಾವೇರಿ ನದಿಗೆ ಗಂಗಾ ಆರತಿಯ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ “ಕಾವೇರಿ ಆರತಿ” ಕಾರ್ಯಕ್ರಮವು ಸೆಪ್ಟೆಂಬರ್ 26 ರಿಂದ ಐದು ದಿನಗಳ ಕಾಲ ಕೃಷ್ಣರಾಜಸಾಗರ (ಕೆಆರ್‌ಎಸ್) ಬೃಂದಾವನ ಉದ್ಯಾನವನದಲ್ಲಿ ಜರುಗಲಿದೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು ರಾಜ್ಯ ಮತ್ತು ಹೊರರಾಜ್ಯಗಳಿಂದ ಪ್ರತಿದಿನ 8,000 ರಿಂದ 10,000ಕ್ಕೂ ಅಧಿಕ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಕಾವೇರಿ ಆರತಿಯನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರಿಗೆ ಉಚಿತವಾಗಿ “ತಾಯಿ ಕಾವೇರಿ ಲಾಡು” ಪ್ರಸಾದವನ್ನು ವಿತರಿಸಲಾಗುವುದು. ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಈ ಲಾಡುಗಳನ್ನು ತಯಾರಿಸಲಾಗಿದ್ದು, ಪ್ರತಿದಿನ ವಿತರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕಾವೇರಿ ಆರತಿಯು ಕನ್ನಡ ನಾಡಿನ ಜೀವನದಿಯಾದ ಕಾವೇರಿಗೆ ಸಂಪ್ರದಾಯಬದ್ಧವಾಗಿ ನಡೆಯುವ ಪ್ರಪ್ರಥಮ ಕಾರ್ಯಕ್ರಮವಾಗಿದ್ದು, ಕೇರಳ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಈ ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸಲಿದ್ದಾರೆ.
ಟೋಲ್ ಮತ್ತು ಪ್ರವೇಶ ಶುಲ್ಕ ರದ್ದು
ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 2 ರವರೆಗೆ ಕೆಆರ್‌ಎಸ್ ಬೃಂದಾವನಕ್ಕೆ ಆಗಮಿಸುವ ಸಾರ್ವಜನಿಕರ ವಾಹನಗಳಿಗೆ ಟೋಲ್ ಶುಲ್ಕ, ವಾಹನ ನಿಲುಗಡೆ ಶುಲ್ಕ ಹಾಗೂ ಬೃಂದಾವನ ವೀಕ್ಷಣೆಗೆ ಪ್ರವೇಶ ಶುಲ್ಕ ವಿಧಿಸದಿರಲು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ ಬಾಬು ಬಂಡಿಸಿದ್ದೇಗೌಡ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆ
ಸೆಪ್ಟೆಂಬರ್ 26 ರಂದು ಸಂಜೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸ್ತ್ರೋಕ್ತವಾಗಿ “ಕಾವೇರಿ ಆರತಿ” ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕೃಷ್ಣರಾಜಸಾಗರವು ಸಾಕ್ಷಿಯಾಗಲಿದೆ.
ಕಾವೇರಿ ಆರತಿಯು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮವಾಗಿದ್ದು, ಇದು ಕಾವೇರಿ ನದಿಯ ಮಹತ್ವವನ್ನು ಇನ್ನಷ್ಟು ಎತ್ತಿಹಿಡಿಯಲಿದೆ.