ಬೆಂಗಳೂರು, ಏಪ್ರಿಲ್ 23 (ಕರ್ನಾಟಕ ವಾರ್ತೆ): ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಕನ್ನಡಿಗರು ಮೃತಪಟ್ಟಿರುವ ಘಟನೆ ರಾಜ್ಯದಲ್ಲಿ ಆತಂಕ ಮೂಡಿಸಿದೆ. ಈ ದುರ್ಘಟನೆಯ ಹಿನ್ನೆಲೆಯಲ್ಲಿ, ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ಮರಳಿ ಕರೆತರುವ ಉದ್ದೇಶದಿಂದ ರಾಜ್ಯ ಸರ್ಕಾರವು ವಿಶೇಷ ಸಹಾಯವಾಣಿ ಸ್ಥಾಪಿಸಿದೆ.
ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿದ್ದು, ಕರ್ನಾಟಕದಿಂದ ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವವರ ವಿವರಗಳನ್ನು ಸಂಗ್ರಹಿಸಲು ಪ್ರವಾಸಿ ಕಾರ್ಯಾಚರಣೆದಾರರು (Tour Operators & Travel Agents) ಹಾಗೂ ಪ್ರವಾಸಿಗರ ಸಂಬಂಧಿಕರು/ಪರಿಚಯಸ್ಥರಿಗೆ ಸೂಚನೆ ನೀಡಿದೆ. ಈ ವಿವರಗಳನ್ನು ಕೆಳಗಿನ ಸಹಾಯವಾಣಿ ಸಂಖ್ಯೆಗಳಿಗೆ ಒದಗಿಸುವಂತೆ ಕೋರಲಾಗಿದೆ:
- 080-43344334
- 080-43344335
- 080-43344336
- 080-43344342
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಮಧುಸೂದನ್ ರಾವ್ (45) ಹಾಗೂ ಇನ್ನೊಬ್ಬ ಕನ್ನಡಿಗ ಭರತ್ ಭೂಷಣ್ ಸೇರಿದಂತೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮಧುಸೂದನ್ ರಾವ್ ಅವರ ಮೃತದೇಹವನ್ನು ಶ್ರೀನಗರದಿಂದ ಚೆನ್ನೈ ಮೂಲಕ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕಾವಲಿಯಲ್ಲಿರುವ ಅವರ ತವರೂರಿಗೆ ರವಾನಿಸಲು ಕುಟುಂಬಸ್ಥರ ಮನವಿಯಂತೆ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಶ್ರೀನಗರದಿಂದ ಚೆನ್ನೈಗೆ ಮೃತದೇಹ ತಲುಪಲಿದ್ದು, ನಂತರ ರಸ್ತೆ ಮಾರ್ಗವಾಗಿ ಕಾವಲಿಗೆ ಸ್ಥಳಾಂತರಗೊಳ್ಳಲಿದೆ.
ರಾಜ್ಯ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಶ್ರೀನಗರಕ್ಕೆ ತೆರಳಿ, ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಜಮ್ಮು-ಕಾಶ್ಮೀರದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಕರ್ನಾಟಕದಿಂದ ತೆರಳಿದ ಪ್ರವಾಸಿಗರ ಸುರಕ್ಷತೆಗಾಗಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ದುರಂತ ಘಟನೆಯಿಂದಾಗಿ ಜಮ್ಮು-ಕಾಶ್ಮೀರದ ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನಡೆಯಾಗಿದ್ದು, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ. ಪ್ರವಾಸಿಗರ ಸಂಬಂಧಿಕರಿಗೆ ತಮ್ಮ ಕುಟುಂಬ ಸದಸ್ಯರ ವಿವರಗಳನ್ನು ಸಹಾಯವಾಣಿಗೆ ಒದಗಿಸುವ ಮೂಲಕ ಸರ್ಕಾರದ ಪ್ರಯತ್ನಕ್ಕೆ ಸಹಕಾರ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಮನವಿ ಮಾಡಿದೆ.