ಬೆಂಗಳೂರು: ಕಿರುತೆರೆ ನಟಿ ಶರ್ಮಿಳಾ ಚಂದ್ರಶೇಖರ್ ಅವರಿಗೆ ಸೈಬರ್ ಖದೀಮರಿಂದ ಬೆದರಿಕೆ ಕಾಟ ಎದುರಾಗಿದೆ. ಹಣ ನೀಡದಿದ್ದರೆ ಅಶ್ಲೀಲ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಖದೀಮರು ಧಮಕಿ ಹಾಕಿದ್ದಾರೆ. ಈ ಬಗ್ಗೆ ಶರ್ಮಿಳಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ.
‘ಸೀತೆ’, ‘ಪತ್ತೇದಾರಿ ಪ್ರತಿಭಾ’, ‘ಅಂತರಪಟ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ಶರ್ಮಿಳಾ, ‘ವೇವ್‌ಕ್ಯಾಶ್ ಲೋನ್ ಆಪ್’ನಿಂದ ಸಾಲ ಮಂಜೂರಾಗಿದೆ ಎಂದು ಸಂದೇಶ ಬಂದಿರುವುದಾಗಿ ತಿಳಿಸಿದ್ದಾರೆ. ಆದರೆ, ತಾವು ಯಾವುದೇ ಸಾಲ ಪಡೆದಿಲ್ಲವಾದರೂ, ಸಾಲ ತೀರಿಸದಿದ್ದರೆ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಎಲ್ಲರಿಗೂ ಕಳುಹಿಸುವುದಾಗಿ ಬೆದರಿಕೆ ಸಂದೇಶಗಳು ಬಂದಿವೆ ಎಂದು ಅವರು ಆರೋಪಿಸಿದ್ದಾರೆ.
ತಮ್ಮ ವಿಡಿಯೋ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿರುವ ಶರ್ಮಿಳಾ, “ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಅಶ್ಲೀಲ ಫೋಟೋಗಳು ಕಂಡುಬಂದರೆ ಅವು ನಕಲಿಯಾಗಿರುತ್ತವೆ. ಇಂತಹ ಸಂದೇಶಗಳು ಅಥವಾ ಕರೆಗಳು ನಿಮಗೂ ಬಂದರೆ ತಕ್ಷಣ ದೂರು ನೀಡಿ, ಮೋಸಕ್ಕೆ ಒಳಗಾಗಬೇಡಿ,” ಎಂದು ಕೋರಿದ್ದಾರೆ.
ಈ ಘಟನೆಯಿಂದ ಸೈಬರ್ ಕ್ರೈಂಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಿದ ನಟಿ, ಇಂತಹ ವಂಚನೆಗಳಿಂದ ಎಚ್ಚರಿಕೆಯಿಂದಿರುವಂತೆ ಜನರಿಗೆ ತಿಳಿಸಿದ್ದಾರೆ.