ಕುಣಿಗಲ್ ತಾಲೂಕಿನ ಜನರಿಗೆ ತಮ್ಮ ನ್ಯಾಯಯುತ ಪಾಲಿನ 3.01 ಟಿಎಂಸಿ ಹೇಮಾವತಿ ನೀರನ್ನು ಪಡೆಯಲು ಲಿಂಕ್ ಕೆನಾಲ್ ಯೋಜನೆ ಅನಿವಾರ್ಯವಾಗಿದ್ದು, ಈ ಯೋಜನೆಗಾಗಿ ಉಗ್ರ ಹೋರಾಟಕ್ಕೂ ಸಿದ್ಧ ಎಂದು ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ತಿಳಿಸಿದ್ದಾರೆ.
ತಾಲೂಕಿನ ಜನರು ಆರಂಭದಿಂದಲೂ ತಮ್ಮ ಪಾಲಿನ ನೀರಿನಿಂದ ವಂಚಿತರಾಗಿದ್ದಾರೆ. “ವೈ.ಕೆ. ರಾಮಯ್ಯ ಅವರ ಹೋರಾಟದ ಫಲವಾಗಿ ತುಮಕೂರು ಜಿಲ್ಲೆಗೆ ಹೇಮಾವತಿ ನೀರಿನ ಶೇ.49ರಷ್ಟು ಪಾಲು ದೊರೆತಿದೆ. ಆದರೆ, ಕಾವೇರಿ ಜಲಾನಯನ ಪ್ರದೇಶದ ಮೂಲ ಫಲಾನುಭವಿಯಾಗಿದ್ದರೂ ಕುಣಿಗಲ್ ತಾಲೂಕಿಗೆ ಕಳೆದ ಹತ್ತು ವರ್ಷಗಳಲ್ಲಿ ಕೇವಲ 300-500 ಎಂಸಿಎಫ್ ನೀರು ಮಾತ್ರ ಸಿಕ್ಕಿದೆ. ಶೇ.90ರಷ್ಟು ನೀರು ನಮಗೆ ತಲುಪಿಲ್ಲ” ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
2018ರಲ್ಲಿ ಈ ಅನ್ಯಾಯವನ್ನು ಸರಿಪಡಿಸಲು ಲಿಂಕ್ ಕೆನಾಲ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತಾದರೂ, ಹಲವಾರು ಅಡೆತಡೆಗಳಿಂದ ಕಾಮಗಾರಿ ವಿಳಂಬವಾಯಿತು. “ಈಗ ಕಾಮಗಾರಿ ಪ್ರಾರಂಭವಾಗಿ ಕುಣಿಗಲ್ ಜನತೆಯ ದಶಕಗಳ ಕನಸು ನನಸಾಗುವ ಹೊತ್ತಿನಲ್ಲಿ, ಯೋಜನೆಗೆ ವಿರೋಧವ್ಯಕ್ತವಾಗಿರುವುದು ವಿಷಾದನೀಯ” ಎಂದು ಡಾ. ರಂಗನಾಥ್ ಹೇಳಿದ್ದಾರೆ.
ಕುಣಿಗಲ್ ತಾಲೂಕಿನ ಜನರು ತಮ್ಮ ಪಾಲಿನ ನೀರು ಸಿಗದಿದ್ದರೂ, ಜಿಲ್ಲೆಯ ಇತರ ತಾಲೂಕುಗಳಿಗೆ ಕುಡಿಯುವ ನೀರಿಗಾಗಿ ಹೇಮಾವತಿ ನೀರನ್ನು ಹಂಚಿಕೆ ಮಾಡಿದಾಗ ಯಾವುದೇ ವಿರೋಧ ವ್ಯಕ್ತಪಡಿಸದೆ ಔದಾರ್ಯತೆ ತೋರಿದ್ದರು. “ಆದರೆ ಇಂದು ನಮ್ಮ ಪಾಲಿನ ನೀರಿಗಾಗಿ ಕೈಗೊಂಡ ಕಾಮಗಾರಿಗೆ ಅಡ್ಡಿಪಡಿಸುವುದು ನೋವಿನ ಸಂಗತಿ” ಎಂದು ಅವರು ತಿಳಿಸಿದ್ದಾರೆ.
ಈ ಲಿಂಕ್ ಕೆನಾಲ್ ಪೈಪ್‌ಲೈನ್ ಕಾಮಗಾರಿಯನ್ನು ಕುಣಿಗಲ್ ತಾಲೂಕಿಗೆ ಹಂಚಿಕೆಯಾದ 388 ಕ್ಯೂಸೆಕ್ಸ್ ನೀರನ್ನು ಮಾತ್ರ ಹರಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಜಿಲ್ಲೆಯ ಇತರ ತಾಲೂಕುಗಳ ಪಾಲಿನ ನೀರಿಗೆ ಯಾವುದೇ ಧಕ್ಕೆಯಾಗದು ಎಂದು ಸರ್ಕಾರದ ತಜ್ಞರ ಸಮಿತಿಯೂ ಸ್ಪಷ್ಟಪಡಿಸಿದೆ.
“ಕೆಲವು ರಾಜಕೀಯ ಸ್ವಾರ್ಥಿಗಳು ಯೋಜನೆಯ ಬಗ್ಗೆ ಅಪಪ್ರಚಾರ ಮಾಡಿ, ಜಿಲ್ಲೆಯ ಜನರಲ್ಲಿ ದ್ವೇಷ ಬಿತ್ತಲು ಯತ್ನಿಸುತ್ತಿದ್ದಾರೆ. ರೈತರು ಮತ್ತು ಸಂಘ-ಸಂಸ್ಥೆಗಳು ಇಂತಹ ಅಪಪ್ರಚಾರಕ್ಕೆ ಕಿವಿಗೊಡದೆ, ಕುಣಿಗಲ್ ಜನರಿಗೆ ತಮ್ಮ ಪಾಲಿನ ನೀರು ಒದಗಿಸುವ ಈ ಯೋಜನೆಗೆ ಸಹಕರಿಸಬೇಕು” ಎಂದು ಶಾಸಕರು ಮನವಿ ಮಾಡಿದ್ದಾರೆ.
“ಯೋಜನೆಗೆ ಸರಿಯಾದ ಸಹಕಾರ ಸಿಗದಿದ್ದರೆ, ಕುಣಿಗಲ್ ಜನತೆಯ ಪರವಾಗಿ ಉಗ್ರ ಹೋರಾಟಕ್ಕೆ ಸಿದ್ಧನಿದ್ದೇನೆ” ಎಂದು ಡಾ. ರಂಗನಾಥ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












