ಕಲಬುರಗಿ: ಕುರುಬ ಸಮಾಜವು ಇತಿಹಾಸ ಸೃಷ್ಟಿಸಿದ ಸಮಾಜವಾಗಿದ್ದು, ಸಾಹಿತ್ಯ, ಆಧ್ಯಾತ್ಮಿಕತೆ, ಸಾಮ್ರಾಜ್ಯ ಸ್ಥಾಪನೆ ಹಾಗೂ ಶೌರ್ಯಕ್ಕೆ ಹೆಸರಾಗಿದೆ. ಜೊತೆಗೆ ಸಾಮಾಜಿಕ ನ್ಯಾಯಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದಾದ್ಯಂತ ಗುರುತಿಸಿಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಸಿಟಿ ಬಸ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರು ನಾಮಕರಣ ಮಾಡುವ ಕಾರ್ಯಕ್ರಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಅನಾವರಣ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸಚಿವ ಖರ್ಗೆ ಭಾಗವಹಿಸಿ ಮಾತನಾಡಿದರು.

ಕುರುಬ ಸಮಾಜವು ಎಂದಿಗೂ ನಂಬಿಕೆಗೆ ದ್ರೋಹ ಬಗೆಯದ ಸಮಾಜವಾಗಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಚುನಾವಣೆಗೆ ಮುನ್ನ ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ನುಡಿದಂತೆ ನಡೆಯುತ್ತಿದೆ ಎಂದು ಖರ್ಗೆ ತಿಳಿಸಿದರು.
ಕುರುಬ ಸಮಾಜಕ್ಕೆ 3 ಎಕರೆ ಜಮೀನು ಮೀಸಲಿಡುವುದು ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯ ಬೇಡಿಕೆಯು ಬಹುಕಾಲದಿಂದ ನೆನೆಗುದಿಗೆ ಬಿದ್ದಿತ್ತು. ಆದರೆ, ಎಲ್ಲ ಅಡೆತಡೆಗಳನ್ನು ನಿವಾರಿಸಿ ಈ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಅವರು ಹೇಳಿದರು.
ಸಚಿವ ಖರ್ಗೆ ಮಾತನಾಡುತ್ತಾ, “ಸುಳ್ಳಿನ ಮಾತುಗಳನ್ನು ನಂಬಬೇಡಿ. ನಿಮ್ಮ ಪರವಾಗಿ ಕೆಲಸ ಮಾಡುವವರನ್ನು, ಅಭಿವೃದ್ಧಿ ಕಾರ್ಯಗಳನ್ನು ಮಾಡುವವರನ್ನು ಬೆಂಬಲಿಸಿ. ದೇಶದಲ್ಲಿ ವಿಚಿತ್ರ ವಾತಾವರಣ ಸೃಷ್ಟಿಯಾಗಿದೆ. ಸಂವಿಧಾನದ ರಕ್ಷಣೆಗಾಗಿ ಒಂದೆಡೆ ಹೋರಾಟ ನಡೆಯುತ್ತಿದ್ದರೆ, ಮನುಸ್ಮೃತಿಯ ಜಾರಿಗೆ ಮತ್ತೊಂದೆಡೆ ಷಡ್ಯಂತ್ರ ನಡೆಯುತ್ತಿದೆ. ಈ ಷಡ್ಯಂತ್ರದ ವಿರುದ್ಧ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಹೋರಾಟ ನಡೆಸುತ್ತಿದ್ದಾರೆ. ನೀವೆಲ್ಲರೂ ಅವರ ಕೈ ಬಲಪಡಿಸಬೇಕು” ಎಂದು ಮನವಿ ಮಾಡಿದರು.
ಸಚಿವ ಭೈರತಿ ಸುರೇಶ್ ಮಾತನಾಡಿ, ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯವಾಗುತ್ತದೆ. ಕುರುಬ ಸಮಾಜದವರು ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಿದ್ದರಾಮನಂದ ಮಹಾಸ್ವಾಮಿ, ಮಾಳಿಂಗರಾಯ ಮಹಾರಾಜ, ಹವಾ ಮಲ್ಲಿನಾಯಕ ಮಹಾರಾಜ, ಸಂಸದ ರಾಧಾಕೃಷ್ಣ ದೊಡ್ಡಮನಿ, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ಗುರುನಾಥ ಎಸ್. ಪೂಜಾರಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.