ಬೆಂಗಳೂರು: ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ರಾಷ್ಟ್ರೀಯ ಕೃಷಿ ಕೀಟವಿಜ್ಞಾನ ಸಂಶೋಧನಾ ಸಂಸ್ಥೆ (NBAIR), ಬೆಂಗಳೂರು ಇಂದು ‘ಪಿಎಂ ಧನ್ ಧಾನ್ಯ ಕೃಷಿ ಯೋಜನೆ’ ಮತ್ತು ‘ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತೆಗಾಗಿ ಮಿಷನ್’ ಕಾರ್ಯಕ್ರಮವನ್ನು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದಲ್ಲಿ ಉದ್ಘಾಟಿಸಿತು. ಕಾರ್ಯಕ್ರಮದಲ್ಲಿ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವೆ ಶ್ರೀಮತಿ ಶೋಭಾ ಕಾರಂಡ್ಲಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ICAR-NBAIR ನ ನಿರ್ದೇಶಕ ಡಾ. ಎಸ್. ಎನ್. ಸುಶೀಲ್ ಅವರು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು ಮತ್ತು ಸಂಸ್ಥೆಯು ರೈತರ ಉನ್ನತಿಗಾಗಿ ನಡೆಸುತ್ತಿರುವ ವಿವಿಧ ಚಟುವಟಿಕೆಗಳು ಮತ್ತು ಇದರ ಪಾತ್ರವನ್ನು ವಿವರಿಸಿದರು.

ಶ್ರೀಮತಿ ಶೋಭಾ ಕಾರಂಡ್ಲಾಜೆ ತಮ್ಮ ಭಾಷಣದಲ್ಲಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ದೇಶವು ಆತ್ಮನಿರ್ಭರವಾಗುವ ಅಗತ್ಯವನ್ನು ಒತ್ತಿಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರವು ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಪ್ರಸ್ತುತ 245 ಲಕ್ಷ ಟನ್‌ಗಳಿಂದ 345 ಲಕ್ಷ ಟನ್‌ಗಳಿಗೆ ಏರಿಕೆ ಮಾಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು. ರೈತರು ಸಾವಯವ ಮತ್ತು ಸಾಂಪ್ರದಾಯಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣಿನ ಆರೋಗ್ಯ ಮತ್ತು ಪರಿಸರ ಸಮತೋಲನವನ್ನು ಕಾಪಾಡಬೇಕೆಂದು ಸೂಚಿಸಿದರು.
ಅವರು ರೈತರಿಗೆ ICAR-NBAIRನಂತಹ ಪ್ರಮುಖ ಸಂಸ್ಥೆಯನ್ನು ಭೇಟಿಯಾಗಿ ಜೈವಿಕ ನಿಯಂತ್ರಣ ಏಜೆಂಟ್‌ಗಳು ಮತ್ತು ಜೈವಿಕ ತಂತ್ರಜ್ಞಾನಗಳ ಮೂಲಕ ಕೀಟನಿಯಂತ್ರಣದ ಕುರಿತು ತಿಳಿದುಕೊಳ್ಳಲು ತಿಳಿಸಿದರು. ಜೊತೆಗೆ, ಆಧುನಿಕ ಜೈವಿಕ ನಿಯಂತ್ರಣ ವಿಧಾನಗಳ ಕುರಿತು ತರಬೇತಿ ಪಡೆಯಲು ಮತ್ತು ಕೃಷಿ ವಿಜ್ಞಾನ ಕೇಂದ್ರಗಳು (KVK) ಹಾಗೂ ಕೃಷಿ ಸಂಶೋಧನಾ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಲು ರೈತರಿಗೆ ಸಲಹೆ ನೀಡಿದರು. ಇದರಿಂದ ಹೊಸ ಬೆಳೆ ತಳಿಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ತಿಳಿದುಕೊಂಡು ಕೃಷಿಯ ಉತ್ಪಾದಕತೆ ಮತ್ತು ಲಾಭವನ್ನು ಹೆಚ್ಚಿಸಬಹುದು ಎಂದರು. ಸಾವಯವ ಕೃಷಿಯನ್ನು ಬೆಂಬಲಿಸುವ ಉಪಯುಕ್ತ ಕೀಟಗಳ ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳಿದ ಅವರು, ರೈತರು ರಾಸಾಯನಿಕ-ಮುಕ್ತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ತಮ್ಮ ಆರೋಗ್ಯ ಮತ್ತು ಪರಿಸರವನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ, ಪರಿಶಿಷ್ಟ ಜಾತಿ ಉಪ ಯೋಜನೆ (SCSP) ಮತ್ತು ಗಿರಿಜನ ಉಪ ಯೋಜನೆ (TSP) ಅಡಿಯಲ್ಲಿ ಶ್ರೀಮತಿ ಶೋಭಾ ಕಾರಂಡ್ಲಾಜೆ ಅವರು ರೈತರಿಗೆ ಜೈವಿಕ ನಿಯಂತ್ರಣ ಸಾಮಗ್ರಿಗಳನ್ನು ವಿತರಿಸಿದರು. ಬೆಂಗಳೂರು ಗ್ರಾಮೀಣ ಮತ್ತು ಕೋಲಾರ ಜಿಲ್ಲೆಯ ಸುಮಾರು 350 ರೈತರು, ಜೊತೆಗೆ ICAR-NBAIRನ ವಿಜ್ಞಾನಿಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.