ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ 3ನೇ ಹಂತ) ಜಾರಿಗೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಯೋಜನೆಗೆ ಅಧಿಸೂಚನೆ ಹೊರಡಿಸದೇ ಇರುವುದು ಹಾಗೂ ನೆರೆ ರಾಜ್ಯಗಳು ದಾವೆಗಳ ಮೂಲಕ ಅಡ್ಡಿಪಡಿಸುತ್ತಿರುವುದನ್ನು ಅವರು ಟೀಕಿಸಿದರು.
ವಿಜಯಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುತ್ತಿಲ್ಲ. ಆದರೂ ನಾವು ಕೆರೆಗಳನ್ನು ತುಂಬಿಸಿ ಸಾವಿರಾರು ಎಕರೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದೇವೆ. ಈ ಭಾಗದಲ್ಲಿ 21 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಯುಕೆಪಿ 3ನೇ ಹಂತದಿಂದ 80 ಟಿಎಂಸಿ ನೀರು ಲಭ್ಯವಾಗಲಿದೆ. ನಾನು ಸಚಿವನಾದ ಬಳಿಕ ಈ ಜಿಲ್ಲೆಗೆ 3,700 ಕೋಟಿ ರೂ. ಮಂಜೂರು ಮಾಡಿದ್ದೇವೆ. 1.19 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದ್ದೇವೆ” ಎಂದು ತಿಳಿಸಿದರು.
ಭೂಮಿ ಮುಳುಗಡೆ ಸಂತ್ರಸ್ತ ರೈತರಿಗೆ ಎಕರೆಗೆ 35-40 ಲಕ್ಷ ಪರಿಹಾರ ಘೋಷಣೆ
ವಿಜಯಪುರ: ಯುಕೆಪಿ ಯೋಜನೆಯಿಂದ ಭೂಮಿ ಮುಳುಗಡೆಯಾಗುವ ಸಂತ್ರಸ್ತ ರೈತರಿಗೆ ಪ್ರತಿ ಎಕರೆಗೆ 35-40 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಕಾಲುವೆ ಭೂ ಸಂತ್ರಸ್ತರಿಗೆ 25-30 ಲಕ್ಷ ರೂ. ಪರಿಹಾರ ನೀಡಲು ನಿರ್ಧಾರ ಮಾಡಲಾಗಿದೆ.
“ಕಳೆದ ಬೊಮ್ಮಾಯಿ ಸರ್ಕಾರ ಪ್ರತಿ ಎಕರೆಗೆ 20-25 ಲಕ್ಷ ನೀಡಲು ನಿರ್ಧರಿಸಿತ್ತು. ನಮ್ಮ ಸರ್ಕಾರ 1,33,867 ಎಕರೆ ಮುಳುಗಡೆಗೆ 30-40 ಲಕ್ಷ ಪರಿಹಾರ ನೀಡಲಿದೆ. ಇದಕ್ಕೆ 70 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಶಾಸಕರ ಒತ್ತಡದ ಮೇಲೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ” ಎಂದು ಅವರು ಹೇಳಿದರು.
29 ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿ ಪೆಂಡಿಂಗ್ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನ್ಯಾಯಾಲಯಕ್ಕೆ ಹೋಗಿ ಹೆಚ್ಚಿನ ಪರಿಹಾರ ಪಡೆಯುವುದು ಸಾಧ್ಯವಿಲ್ಲ. ಕೋಟಿಗಟ್ಟಲೆ ಪರಿಹಾರ ನೀಡಿದರೆ ಯಾವ ಸರ್ಕಾರವೂ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ. ಸರ್ಕಾರದ ಪರಿಹಾರ ಸ್ವೀಕರಿಸಿ ಭೂಮಿ ನೀಡಿ ಸಹಕರಿಸಿ” ಎಂದು ರೈತರಲ್ಲಿ ಮನವಿ ಮಾಡಿದರು.

ಸರ್ವಜನಾಂಗದ ಶಾಂತಿಯ ತೋಟವಾಗಿ ವಿಜಯಪುರ-ಬಾಗಲಕೋಟೆ: ಡಿ.ಕೆ.ಶಿ
ವಿಜಯಪುರ: ಎಲ್ಲ ಜಾತಿ, ಸಮುದಾಯ, ಧರ್ಮಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದೇ ಸರ್ಕಾರದ ಶಕ್ತಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಿಂಬೆ ನಾಡಿಗೆ ಆಹ್ವಾನಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಮತ್ತು ಗೋಲಗುಂಬಜ್ ಮಾದರಿ ಸ್ಮರಣಿಕೆ ನೀಡಿ ಸನ್ಮಾನಿಸಿದ್ದಕ್ಕೆ ಕೃತಜ್ಞತೆ ತಿಳಿಸಿದರು.
ಸರ್ವಜ್ಞ ವಚನಗಳನ್ನು ಉಲ್ಲೇಖಿಸಿದ ಅವರು, “ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಹತ್ತು ಶಾಸಕರನ್ನು ನೀಡಿ ಬಲಿಷ್ಠ ಸರ್ಕಾರಕ್ಕೆ ಬೆಂಬಲ ನೀಡಿರುವ ನಿಮಗೆ ಕೋಟಿ ನಮನಗಳು” ಎಂದರು. ಬಸ್ ನಿಲ್ದಾಣಗಳಿಗೆ ರಾಣಿ ಚೆನ್ನಮ್ಮ, ಮಡಿವಾಳ ಮಾಚಯ್ಯ, ವೆಂಕಟಪ್ಪ ನಾಯಕ, ಚನ್ನವೀರ ಸ್ವಾಮೀಜಿ ಹೆಸರಿಡುವ ಮೂಲಕ ಸಮಬಾಳು, ಸಮಪಾಲು ತತ್ವ ಅನುಸರಿಸುತ್ತಿದ್ದೇವೆ ಎಂದು ತಿಳಿಸಿದರು.
ಬಸವಣ್ಣನವರ ವಚನಗಳನ್ನು ಸ್ಮರಿಸಿದ ಅವರು, ಈ ಜಿಲ್ಲೆಗಳು ಸರ್ವಜನಾಂಗದ ಶಾಂತಿಯ ತೋಟವಾಗಿವೆ ಎಂದರು. ಒಣ ಭೂಮಿ ಹಣೆಪಟ್ಟಿ ತೊಲಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣ, ಉದ್ಯೋಗ ಸೃಷ್ಟಿಗೆ ಆದ್ಯತೆ: ಡಿ.ಕೆ. ಶಿವಕುಮಾರ್
ವಿಜಯಪುರ: ಉದ್ಯೋಗ ಸೃಷ್ಟಿ, ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಎಂ.ಬಿ. ಪಾಟೀಲ್ ನೇತೃತ್ವದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ತರಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
“ಪ್ರತಿ ವರ್ಷ 1 ಲಕ್ಷ ವೈದ್ಯರು, ನರ್ಸ್‌ಗಳು, 1.5 ಲಕ್ಷ ಇಂಜಿನಿಯರ್‌ಗಳು ತಯಾರಾಗುತ್ತಿದ್ದಾರೆ. ಸಿಎಸ್‌ಆರ್ ನಿಧಿಯಿಂದ ಗ್ರಾಮೀಣ ಶಾಲೆಗಳ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಪ್ರತಿ 2-3 ಪಂಚಾಯತಿಗೆ ಒಂದು ಕೆಪಿಎಸ್ ಶಾಲೆ ಆರಂಭಿಸುತ್ತೇವೆ” ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿರುವುದು ದೇಶದಲ್ಲಿ ಬೇರೆಯಾವ ಸರ್ಕಾರಕ್ಕೂ ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.












