ಬೆಂಗಳೂರು : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ನಾಲ್ಕು ಕಚ್ಚಾ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ಅಪರಿಚಿತ ಇ-ಮೇಲ್ ಐಡಿಯಿಂದ ಬಂದ ಬೆದರಿಕೆ ಪತ್ರವೊಂದು ಭೀತಿಯನ್ನುಂಟು ಮಾಡಿತ್ತು. ಈ ಮೇಲ್‌ನಲ್ಲಿ ವಿಮಾನ ನಿಲ್ದಾಣದಲ್ಲಿ ಸ್ಫೋಟಗೊಂಡ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿಯಲ್ಲಿ ಸ್ಫೋಟ ಸಂಭವಿಸಲಿದೆ ಎಂದೂ ಉಲ್ಲೇಖಿಸಲಾಗಿತ್ತು.
ಬೆದರಿಕೆ ಸಂದೇಶ ಕಂಡು ತಕ್ಷಣ ಕ್ರಮ ಕೈಗೊಂಡ ಬೆಂಗಳೂರು ಪೊಲೀಸರು, ಡಾಗ್ ಸ್ಕ್ವಾಡ್ ಮತ್ತು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಟರ್ಮಿನಲ್ 2ರಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿದರು. ಜೊತೆಗೆ, ಡಿಸಿಎಂ ಶಿವಕುಮಾರ್ ಅವರ ಮನೆ ಹಾಗೂ ಕಚೇರಿಯಲ್ಲೂ ತಪಾಸಣೆ ಕೈಗೊಂಡರು. ತಪಾಸಣೆಯ ಬಳಿಕ ಈ ಬೆದರಿಕೆ ಇ-ಮೇಲ್ ಸಂಪೂರ್ಣ ಹುಸಿಯೆಂದು ದೃಢಪಟ್ಟಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕೆಂಪೇಗೌಡ ಏರ್‌ಪೋರ್ಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಪರಿಚಿತ ಇ-ಮೇಲ್ ಐಡಿಯ ಮೂಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಈ ಘಟನೆಯಿಂದ ಯಾವುದೇ ಜನಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾಗಿಲ್ಲವಾದರೂ, ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಎಲ್ಲರಿಗೂ ಶಾಂತಿಯಿಂದ ಇರಲು ಮನವಿ ಮಾಡಿದ್ದು, ತನಿಖೆ ಮುಂದುವರಿದಿದೆ.