ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ಗೆ Governance Now 12ನೇ ರಾಷ್ಟ್ರೀಯ ಪಿಎಸ್‌ಯು ಪ್ರಶಸ್ತಿ ಲಭಿಸಿದೆ. Excellence in Innovation ವಿಭಾಗದಲ್ಲಿ ನಿಗಮ ಜಾರಿಗೆ ತಂದಿರುವ ‘ಧ್ವನಿ ಸ್ಪಂದನ’ – ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ ಯೋಜನೆಗೆ ಈ ಗೌರವ ದೊರೆತಿದೆ.
ಕೆಎಸ್‌ಆರ್‌ಟಿಸಿಯ ಮೈಸೂರು ನಗರ ಸಾರಿಗೆ ಘಟಕದ ಸುಮಾರು 200 ಬಸ್ಸುಗಳಲ್ಲಿ ‘ಧ್ವನಿ ಸ್ಪಂದನ’ ಯೋಜನೆಯನ್ನು ಜರ್ಮನಿಯ GiZ ಸಂಸ್ಥೆಯ ಸಹಯೋಗದಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯ ಮೂಲಕ ದೃಷ್ಟಿ ವಿಕಲಚೇತನ ಪ್ರಯಾಣಿಕರು ಬಸ್ಸಿನ ಗುರುತು ಹಾಗೂ ಮಾರ್ಗದ ಮಾಹಿತಿಯನ್ನು ಧ್ವನಿ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ಇದರಿಂದ ಅವರ ಪ್ರಯಾಣದ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದ್ದು, ಆತ್ಮವಿಶ್ವಾಸ, ಭದ್ರತೆ ಮತ್ತು ಸಂಚಾರದ ಸ್ವಾತಂತ್ರ್ಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ.
ನವದೆಹಲಿಯ Hotel Eros, Nehru Place ನಲ್ಲಿ ಬುಧವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿಯ ನಿರ್ದೇಶಕರು (ಸಿ ಮತ್ತು ಜಾ) ಶ್ರೀಮತಿ ಗಾಯತ್ರಿ ಕೆ.ಎಂ., ಭಾ.ಆ.ಸೇ. ಅವರು Governance Now ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೈಲಾಶ್ ಅಧಿಕಾರಿ ಹಾಗೂ ನಟ ಅಮಿತ್ ಸಾಧ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.












