ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ 10 ವರ್ಷಗಳಿಂದ ಬಾಕಿ ಇದ್ದ ಅರ್ಜಿಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಇದರ ಭಾಗವಾಗಿ, ಇಂದು (08-07-2025) 14 ಮೃತಾವಲಂಬಿತರಿಗೆ ಕಚೇರಿ ಸಹಾಯಕ (ಸ್ವಚ್ಛತೆ) ಹುದ್ದೆಗೆ ನೇಮಕಾತಿ ಆದೇಶವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಅವರು ವಿತರಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಕೆಎಸ್‌ಆರ್‌ಟಿಸಿ ಒಟ್ಟು 212 ಮೃತಾವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿದೆ. ಇವುಗಳಲ್ಲಿ ಕರಾಸಾ ಪೇದೆ (ಸೆಕ್ಯುರಿಟಿ ಗಾರ್ಡ್) ಹುದ್ದೆಗೆ 107, ಕಚೇರಿ ಸಹಾಯಕ (ಸ್ವಚ್ಛತೆ) ಹುದ್ದೆಗೆ 46, ತಾಂತ್ರಿಕ ಸಹಾಯಕ ಹುದ್ದೆಗೆ 37 ಮತ್ತು ಚಾಲಕ/ನಿರ್ವಾಹಕ/ಚಾಲಕ-ಕಂ-ನಿರ್ವಾಹಕ ಹುದ್ದೆಗೆ 22 ಜನರನ್ನು ನೇಮಕ ಮಾಡಲಾಗಿದೆ. ಇಂದಿನ 14 ನೇಮಕಾತಿಗಳನ್ನು ಸೇರಿಸಿದರೆ, ಒಟ್ಟು 226 ಮೃತಾವಲಂಬಿತರಿಗೆ ಅನುಕಂಪದ ನೌಕರಿಗಳನ್ನು ಒದಗಿಸಲಾಗಿದೆ.

ಇದೇ ವೇಳೆ, ಮುಂದಿನ ಒಂದು ವಾರದೊಳಗೆ 50 ಮೃತಾವಲಂಬಿತರಿಗೆ ಕರಾಸಾ ಪೇದೆ (ಸೆಕ್ಯುರಿಟಿ ಗಾರ್ಡ್) ಹುದ್ದೆಗೆ ದೇಹದಾರ್ಢ್ಯತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಿ ನೇಮಕಾತಿ ಆದೇಶ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಶ್ರೀ ಮೊಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಕ್ರಂ ಪಾಷ, ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತಿ) ಡಾ. ನಂದಿನಿದೇವಿ ಕೆ., ಮತ್ತು ನಿರ್ದೇಶಕರು (ಮಾಹಿತಿ ತಂತ್ರಜ್ಞಾನ) ಶ್ರೀ ಇಬ್ರಾಹಿಂ ಮೈಗೂರ್ ಉಪಸ್ಥಿತರಿದ್ದರು.
ಈ ಕ್ರಮವು ಮೃತಾವಲಂಬಿತ ಕುಟುಂಬಗಳಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುವ ಜೊತೆಗೆ ಕೆಎಸ್‌ಆರ್‌ಟಿಸಿಯ ಸಾಮಾಜಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.