ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸಂಬಂಧ ಪರದಾಡುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಕೆಪಿಎಸ್‍ಸಿ ಪರೀಕ್ಷೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ ಉತ್ತರದ ಸಂಬಂಧ ಅವರು ಮಾತನಾಡಿದರು. ಇವತ್ತು ಪಕ್ಷಾತೀತವಾಗಿ ಎಲ್ಲರೂ ಇದರ ಪರವಾಗಿದ್ದಾರೆ. ಲೋಪದೋಷಗಳು ಆಗಿದ್ದು, ಅದಕ್ಕೆ ಕಾರಣಗಳೇನು ಎಂಬುzನ್ನು ಗಮನಿಸಬೇಕಿದೆ ಎಂದು ನುಡಿದರು.
ಪರೀಕ್ಷೆಗಳಾದರೂ ಫಲಿತಾಂಶ ಬಾರದೆ ಇರುವುದು, ಫಲಿತಾಂಶ ಹೊರಕ್ಕೆ ಬಂದರೂ ಸಂದರ್ಶನ ನಡೆಯದೆ ಇರುವುದು- ಹೀಗೆ ಅನೇಕ ಲೋಪದೋಷಗಳು ಅನೇಕ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿವೆ ಎಂದು ವಿವರಿಸಿದರು.
ಇದು ತಾರ್ಕಿಕ ಅಂತ್ಯಕ್ಕೆ ಹೋಗಲೇಬೇಕಿದೆ. ಮಾನ್ಯ ಮುಖ್ಯಮಂತ್ರಿಗಳೂ ಒಳ್ಳೆಯ ರೀತಿ ಉತ್ತರ ಕೊಟ್ಟಿದ್ದಾರೆ. ವಿಪಕ್ಷ ನಾಯಕರೂ ಸೇರಿ ಎಲ್ಲರೂ ಮಾತನಾಡಿದ್ದಾರೆ. ಇದೊಂದು ತಾರ್ಕಿಕ ಅಂತ್ಯ ಕಾಣಬೇಕಿದೆ ಎಂದರು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ವಯೋಮಿತಿಯಲ್ಲಿ ಸಡಿಲಿಕೆ ನೀಡಬೇಕಿದೆ. ಮರುಪರೀಕ್ಷೆಯೂ ನಡೆಯಬೇಕು. ಪದೇಪದೇ ಈ ರೀತಿ ಆಗದ ರೀತಿಯಲ್ಲಿ ಆಗದಂತೆ ಸರಕಾರ ನೋಡಿಕೊಳ್ಳಬೇಕಿದೆ ಎಂದು ಒತ್ತಾಯಿಸಿದರು.