ಬೆಂಗಳೂರು: “ನಮ್ಮ ನಾಯಕ ಕೆ.ಜೆ. ಜಾರ್ಜ್‌ಗೆ ಅಪಮಾನವಾದರೆ ಸಹಿಸಲಾರೆವು. ಪಕ್ಷದ ಅಧ್ಯಕ್ಷನಾಗಿ ಅವರಿಗೆ ಆಗುವ ಅವಮಾನವನ್ನು ಸುಮ್ಮನೆ ನೋಡಿಕೊಂಡು ಕೂರಲು ನನ್ನಂತಹ ನಾಲಾಯಕ್ ನಾಯಕ ಬೇರೊಬ್ಬನಿಲ್ಲ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ಆಕ್ರೋಶದಿಂದ ಹೇಳಿದರು.
ವಿಧಾನಸಭೆ ಕಲಾಪದ ವಾಗ್ವಾದದ ಬಳಿಕ ಮತ್ತೆ ಆರಂಭವಾದಾಗ ಬುಧವಾರ ಸದನವನ್ನುದ್ದೇಶಿಸಿ ಮಾತನಾಡಿದ ಡಿಸಿಎಂ ಶಿವಕುಮಾರ್, ತಮ್ಮ ರಾಜಕೀಯ ಅನುಭವವನ್ನು ಸ್ಮರಿಸಿದರು. “ನಾನು 10 ಚುನಾವಣೆಗಳನ್ನು ಎದುರಿಸಿ, 8 ಬಾರಿ ಶಾಸಕನಾಗಿ ಇಲ್ಲಿದ್ದೇನೆ. ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ದೇವೇಗೌಡ, ಬೊಮ್ಮಾಯಿ, ಎಸ್.ಎಂ. ಕೃಷ್ಣ, ಯಡಿಯೂರಪ್ಪನವರಂತಹ ದಿಗ್ಗಜರ ಜೊತೆ ಕೆಲಸ ಮಾಡಿದ್ದೇನೆ. ವಿರೋಧ ಪಕ್ಷದಲ್ಲಿ ಎಂ.ಸಿ. ನಾಣಯ್ಯ, ಚಂದ್ರೇಗೌಡರಂತಹ ಮೇಧಾವಿಗಳೂ ಇದ್ದರು,” ಎಂದು ಅವರು ತಿಳಿಸಿದರು.
“ನಮಗೂ ಬಿಸಿರಕ್ತ ಇದೆ”
“ನಮ್ಮಲ್ಲಿಯೂ ಬಿಸಿರಕ್ತ ಇದೆ. ಆದರೆ ಅದನ್ನು ಸರಿಯಾದ ಸ್ಥಳದಲ್ಲಿ ಬಳಸಬೇಕು. ಸಂಸದೀಯ ಪ್ರಜಾಪ್ರಭುತ್ವದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಾನು ಆರಂಭದಲ್ಲಿ ಪದವೀಧರನಲ್ಲ, 47ನೇ ವಯಸ್ಸಿಗೆ ಪದವಿ ಪಡೆದೆ. ದೊಡ್ಡ ಶಿಕ್ಷಣವಿಲ್ಲದಿದ್ದರೂ, ಅನುಭವದಿಂದ ಕಲಿತು ಇಲ್ಲಿಯವರೆಗೆ ಬಂದಿದ್ದೇನೆ. ಯಾವ ಮನುಷ್ಯನೂ ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸುಮ್ಮನಿರಲಾರ,” ಎಂದು ಶಿವಕುಮಾರ್ ಒತ್ತಿ ಹೇಳಿದರು.
“ಪಕ್ಷದ ಅಧ್ಯಕ್ಷನಾಗಿ ಜಾರ್ಜ್‌ಗೆ ಬೆಂಬಲ ನೀಡುವುದು ಕರ್ತವ್ಯ”
“ಕೆ.ಜೆ. ಜಾರ್ಜ್ ಅವರ ಕೆಳಗೆ ಕೆಲಸ ಮಾಡಿದ್ದೇನೆ. ಅವರು ರಾಜ್ಯಾಧ್ಯಕ್ಷರಾಗಿದ್ದಾಗ ನಾನು ತಾಲೂಕು ಅಧ್ಯಕ್ಷನಾಗಿದ್ದೆ. ಅವರಿಗೆ ಆಗುವ ಅಪಮಾನವನ್ನು ಸಹಿಸುವುದು ನನ್ನ ಕರ್ತವ್ಯವಲ್ಲ. ಆವೇಶದಲ್ಲಿ ಮಾತನಾಡಿರಬಹುದು, ಭಾಷೆ ತಪ್ಪಾಗಿರಬಹುದು, ಆದರೆ ನಾನೂ ಮನುಷ್ಯ. ಸಾರ್ವಜನಿಕ ಜೀವನದಲ್ಲಿ ನನ್ನದೇ ಆದ ಸಾಮರ್ಥ್ಯ, ಸಂಘಟನೆ ಶಕ್ತಿ, ಮಾತಿನ ಕಲೆ ಇದೆ,” ಎಂದು ಅವರು ಸ್ಪಷ್ಟಪಡಿಸಿದರು.
“ಸದನದ ಸದಸ್ಯರಿಗೆ ಗೌರವ ನೀಡಬೇಕು”
“ಈ ಸದನಕ್ಕೆ ಬಂದಿರುವವರೆಲ್ಲರೂ ತಮ್ಮದೇ ಆದ ಸಾಧನೆ, ಅನುಭವದಿಂದ ಇಲ್ಲಿಗೆ ಬಂದಿದ್ದಾರೆ. ಕೇವಲ ಹಣದಿಂದ ಇಲ್ಲಿಗೆ ಬರಲು ಸಾಧ್ಯವಿಲ್ಲ. ಶಿವಳ್ಳಿಯ ಆಶ್ರಯ ನಿವೇಶನದಿಂದ, ಚಪ್ಪಲಿ ಹಾಕದವರೂ ಈ ಸದನಕ್ಕೆ ಆಯ್ಕೆಯಾಗಿದ್ದಾರೆ. ಜನ ನಮ್ಮನ್ನು ಆರಿಸಿ ಕಳುಹಿಸಿರುವುದು ನಮ್ಮ ಭಾಗ್ಯ. ಸ್ಪೀಕರ್ ಅವರು ನ್ಯಾಯಾಧೀಶರ ಸ್ಥಾನದಲ್ಲಿ ಕೂತಿದ್ದಾರೆ. ಯಾರ ಆತ್ಮಗೌರವಕ್ಕೂ ಧಕ್ಕೆಯಾಗದಂತೆ ಕಾಪಾಡಿ, ತಪ್ಪಿದರೆ ನಮ್ಮನ್ನು ಸಸ್ಪೆಂಡ್ ಮಾಡಿ, ಆದರೆ ನ್ಯಾಯದಿಂದ ಕೆಲಸ ಮಾಡಿ,” ಎಂದು ಶಿವಕುಮಾರ್ ಮನವಿ ಮಾಡಿದರು.
ಸದನದಲ್ಲಿ ಗೌರವ ಕಾಪಾಡುವ ಕರೆ
ತಮ್ಮ ಭಾಷಣದಲ್ಲಿ ಶಿವಕುಮಾರ್, ಸದನದ ಗೌರವವನ್ನು ಕಾಪಾಡುವ ಜವಾಬ್ದಾರಿಯನ್ನು ಎಲ್ಲ ಸದಸ್ಯರೂ ಒಟ್ಟಿಗೆ ಹೊರಬೇಕು ಎಂದು ಕರೆ ನೀಡಿದರು. “ನಾವು ಯಾರನ್ನೂ ನೋಯಿಸಬಾರದು. ವಿರೋಧ ಪಕ್ಷದವರೂ ತಮ್ಮ ಸಾಧನೆಯಿಂದ ಇಲ್ಲಿಗೆ ಬಂದಿದ್ದಾರೆ. ಸದನದ ಒಳಗೆ ಗೌರವದಿಂದ ವರ್ತಿಸೋಣ,” ಎಂದು ಒತ್ತಾಯಿಸಿದರು.