ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಉಗ್ರರು ಹಾಗೂ ಸರಣಿ ಅತ್ಯಾಚಾರಿಗಳಿಗೆ ಮೊಬೈಲ್ ಫೋನ್ ಸೇರಿದಂತೆ ರಾಜಾತಿಥ್ಯ ಕಲ್ಪಿಸಲಾಗುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, “ಕಾರಾಗೃಹದಲ್ಲಿ ಮಾತ್ರವಲ್ಲ, ಅದಕ್ಕಿಂತಲೂ ಅಪಾಯಕಾರಿ ಭಯೋತ್ಪಾದಕರು ವಿಧಾನಸೌಧದಲ್ಲೇ ಇದ್ದಾರೆ” ಎಂದು ಆರೋಪಿಸಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಚಾರಣಾಧೀನ ಕೈದಿಗಳು ಮತ್ತು ಕುಖ್ಯಾತ ಅಪರಾಧಿಗಳಿಗೆ ಜೈಲು ಸಿಬ್ಬಂದಿ ರಾಜಾತಿಥ್ಯ ನೀಡುತ್ತಿರುವುದು ನಾಚಿಕೆಗೇಡು ಎಂದು ಖಂಡಿಸಿದರು. “ಭಯೋತ್ಪಾದಕರು ಕೇವಲ ಜೈಲಿನಲ್ಲಿರುವುದಿಲ್ಲ. ಅವರಿಗಿಂತ ಹೆಚ್ಚು ಅಪಾಯಕಾರಿಗಳು ವಿಧಾನಸೌಧದಲ್ಲಿದ್ದಾರೆ. ಅವರು ಯಾರು ಎನ್ನುವುದು ನನಗಿಂತ ನಿಮಗೆ ಚೆನ್ನಾಗಿ ಗೊತ್ತು” ಎಂದು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಹೇಳಿದರು.
ರಾಜ್ಯದ ಜನರು ಹಾದಿ ಬೀದಿಯಲ್ಲಿ ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ರಾಜಾತಿಥ್ಯ ನೀಡುವುದು ಹೊಸ ವಿಷಯವಲ್ಲ. ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಕಿತ್ತಾಡಿಕೊಂಡಿದ್ದರು. ನಂತರ ನ್ಯಾಯಾಲಯಗಳು ಜೈಲು ಸಿಬ್ಬಂದಿಗೆ ಕಠಿಣ ಎಚ್ಚರಿಕೆ ನೀಡಿದ್ದವು. ಆದರೂ ಮತ್ತೆ ಇಂಥ ಪ್ರಕರಣಗಳು ಪುನರಾವರ್ತನೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
“ಗುರುತರ ಅಪರಾಧಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಕೊಡುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಹೊಸದಲ್ಲ. ವಿಧಾನಸೌಧದಲ್ಲಿ ಉಗ್ರರನ್ನು ಇಟ್ಟುಕೊಂಡು ಜೈಲಿನ ಉಗ್ರರ ಬಗ್ಗೆ ಚರ್ಚೆ ಮಾಡುವುದು ಕಾಲಹರಣ. ಇದೆಲ್ಲವೂ ಸಮಯ ವ್ಯರ್ಥ ಮಾಡುವ ತನಿಖೆಗಳು” ಎಂದು ಕಟುವಾಗಿ ಟೀಕಿಸಿದರು.
ಮುಖ್ಯಮಂತ್ರಿ, ಗೃಹ ಸಚಿವರನ್ನು ಪ್ರಶ್ನಿಸಿ: ಕುಮಾರಸ್ವಾಮಿ
ಜೈಲು ನಿರ್ವಹಣೆಯಲ್ಲಿ ಪದೇ ಪದೇ ನಡೆಯುತ್ತಿರುವ ವೈಫಲ್ಯಗಳ ಬಗ್ಗೆ ಮಾಧ್ಯಮಗಳು ಮತ್ತು ಜನರು ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಪ್ರಶ್ನಿಸಬೇಕು ಎಂದು ಒತ್ತಾಯಿಸಿದ ಕುಮಾರಸ್ವಾಮಿ, “ಪ್ರತಿದಿನ ಈ ಸರ್ಕಾರದ ವೈಫಲ್ಯಗಳು ಎದ್ದು ಕಾಣುತ್ತಿವೆ. ಬಿಜೆಪಿಗೆ ಮಾನ-ಮರ್ಯಾದೆ ಇಲ್ಲ ಎಂದು ಸಿಎಂ ಹೇಳುತ್ತಾರೆ. ಆದರೆ ಇವರಿಗೆ ಏನಿದೆ ಎಂದು ಪ್ರಶ್ನಿಸಿಕೊಳ್ಳಬೇಕು” ಎಂದರು.
“ಸಿಎಂಗೆ ದೀರ್ಘ ಅನುಭವವಿದೆ. ಇಷ್ಟು ಅನುಭವ ಇಟ್ಟುಕೊಂಡು ಲಘುವಾಗಿ ತೆಗೆದುಕೊಳ್ಳುವುದು ಸರಿಯೇ? ಅವರಿಗೆ ಗುಪ್ತಚರ ಇಲ್ಲವೇ? ಇವರೇ ಕೆಟ್ಟ ಶಕ್ತಿಗಳಿಗೆ ಬೆಂಬಲ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.
ಗೃಹ ಸಚಿವರ ರಾಜಿನಾಮೆಗೆ ಒತ್ತಾಯಿಸುವ ಪ್ರಶ್ನೆಗೆ, “ಒತ್ತಾಯ ಮಾಡಿದ ಕೂಡಲೇ ರಾಜಿನಾಮೆ ನೀಡುವ ಕಾಲವಿದೆಯೇ? ಯಾವ ರಾಜಕಾರಣಿಗೆ ಅಷ್ಟು ನೈತಿಕತೆ ಇದೆ?” ಎಂದು ಪ್ರತಿಕ್ರಿಯಿಸಿದರು.
ಏರ್‌ಪೋರ್ಟ್‌ನಲ್ಲಿ ನಮಾಜ್‌ಗೆ ಪ್ರತ್ಯೇಕ ಕೊಠಡಿ: ಕುಮಾರಸ್ವಾಮಿ ಸಲಹೆ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡುತ್ತಿರುವ ದೃಶ್ಯಗಳ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ವಿವಿಧ ಧರ್ಮೀಯರು ಬರುತ್ತಾರೆ. ಪ್ರಾರ್ಥನೆಗೆ ಪ್ರತ್ಯೇಕ ವ್ಯವಸ್ಥೆ ಇದೆ. ನಾವು ಸಣ್ಣ ಮನಸ್ಸು ತೋರಬಾರದು. ಮುಸ್ಲಿಮರಿಗೆ ಪ್ರತ್ಯೇಕ ಕೊಠಡಿ ಕಲ್ಪಿಸಿ. ಆಗ ಬಹಿರಂಗ ದೃಶ್ಯಗಳು ತಪ್ಪುತ್ತವೆ” ಎಂದು ಅಭಿಪ್ರಾಯಪಟ್ಟರು.











