ಬೆಂಗಳೂರು: ಈ ಬಾರಿಯ ಕೇಂದ್ರ ಬಜೆಟ್‌ನ್ನು 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣಕ್ಕೆ ಮಾರ್ಗಸೂಚಿಯಾಗಿ (ರೋಡ್‌ಮ್ಯಾಪ್) ವಿಶ್ಲೇಷಿಸಿದ್ದಾರೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2047ರ ವಿಕಸಿತ ಭಾರತಕ್ಕೆ ಅತ್ಯಂತ ಸ್ಪಷ್ಟವಾದ ರೋಡ್‌ಮ್ಯಾಪ್ ಸಿದ್ಧಪಡಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಈ ರೋಡ್‌ಮ್ಯಾಪ್ ಮೂರು ಪ್ರಮುಖ ಸ್ತಂಭಗಳನ್ನು ಆಧರಿಸಿದೆ ಎಂದು ವಿವರಿಸಿದ ಅವರು, ಅದು ಉತ್ಪಾದನಾ ಕ್ಷೇತ್ರದ ನಾವೀನ್ಯತೆ ಹಾಗೂ ದೇಶವನ್ನು ಆಧುನಿಕ ವಿಶ್ವಕ್ಕೆ ಸಿದ್ಧಪಡಿಸುವುದು, ಸಮಾಜದ ಪ್ರತಿ ವರ್ಗವೂ ಬೆಳವಣಿಗೆಯ ಪ್ರಯೋಜನ ಪಡೆಯುವ ಅಂತರ್ಗತ ಬೆಳವಣಿಗೆ ಮತ್ತು ನಾವು ನಿರ್ವಹಿಸಬೇಕಾದ ಕರ್ತವ್ಯಗಳು ಎಂದು ತಿಳಿಸಿದರು.
ಮೇಕ್ ಇನ್ ಇಂಡಿಯಾ ಉತ್ತಮ ಸಾಧನೆ ಮಾಡಿದ್ದು, ಈ ಬಜೆಟ್‌ನಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ವಿಶೇಷ ಒತ್ತು ನೀಡಲಾಗಿದೆ. ಬಯೋಫಾರ್ಮಾ, ವಾಯುಯಾನ, ಬಾಹ್ಯಾಕಾಶ ಹಾಗೂ ಹೈಟೆಕ್ ಟೂಲ್ ರೂಮ್‌ಗಳ ಮೂಲಕ ಪ್ರಿಸಿಶನ್ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಬೆಂಗಳೂರಿನ ಸೆಂಟ್ರಲ್ ಟೂಲ್ ರೂಮ್ ಮೂಲಕ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಸಾಧನೆ ಉದಾಹರಣೆಯಾಗಿದೆ ಎಂದರು.

ರಫ್ತು ಆಧಾರಿತ ರಾಷ್ಟ್ರವಾಗಿ ಬೆಳೆಯಲು ನೌಕಾಯಾನ, ನೌಕಾ ತಯಾರಿಕೆ ಹಾಗೂ ಹಡಗುಗಳ ಅಗತ್ಯವಿದ್ದು, ನೌಕಾ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಬಟ್ಟೆ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ ಬೃಹತ್ ಟೆಕ್ಸ್‌ಟೈಲ್ ಪಾರ್ಕ್‌ಗಳ ನಿರ್ಮಾಣ ಮತ್ತು ಸಂಶೋಧನೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಕಳೆದ ಒಂದು ದಶಕದಲ್ಲಿ ಇಲೆಕ್ಟ್ರಾನಿಕ್ಸ್ ಉತ್ಪಾದನೆ 6 ಪಟ್ಟು ಹೆಚ್ಚಾಗಿದ್ದು, ರಫ್ತು 8 ಪಟ್ಟು ಏರಿಕೆಯಾಗಿದೆ. ಪ್ರಪಂಚದ ಟಾಪ್-3 ಇಲೆಕ್ಟ್ರಾನಿಕ್ಸ್ ಉತ್ಪಾದಕರಲ್ಲಿ ಭಾರತ ಸೇರಿದೆ. ಇಲೆಕ್ಟ್ರಾನಿಕ್ಸ್ ಕಂಪೋನೆಂಟ್‌ಗಳ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದ್ದು, 46 ಘಟಕಗಳಿಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕದಲ್ಲಿ ಈ ಕ್ಷೇತ್ರಕ್ಕೆ 10 ಸಾವಿರ ಕೋಟಿ ಹೂಡಿಕೆಯಾಗಿದ್ದು, ಕೊಡುಗೆಯನ್ನು 22 ಸಾವಿರ ಕೋಟಿಯಿಂದ 40 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನೆಗೆ ಒತ್ತು ನೀಡಲಾಗುತ್ತಿದ್ದು, 200 ಪರಂಪರಾ ಕೈಗಾರಿಕಾ ಸಮೂಹಗಳ ಪುನರುತ್ಥಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ವೆಚ್ಚ ನಿಯಂತ್ರಣ, ತ್ಯಾಜ್ಯ ಸಂಸ್ಕರಣೆ, ನೀರು ಸೌಲಭ್ಯ, ಕಾರ್ಮಿಕರ ಗೃಹ ವ್ಯವಸ್ಥೆ, ರಸ್ತೆಗಳ ಸುಧಾರಣೆ ಇತ್ಯಾದಿಗಳನ್ನು ಅಳವಡಿಸಲಾಗುತ್ತಿದೆ.

ಕ್ರೀಡಾ ಸಾಮಗ್ರಿ ಉತ್ಪಾದನೆಯ ಮೂಲಕ ಹೆಚ್ಚು ಉದ್ಯೋಗ ಸೃಷ್ಟಿಯ ಸಾಧ್ಯತೆ ಇದ್ದು, ಈ ಕ್ಷೇತ್ರಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದರು.
ಅಂತರ್ಗತ ಬೆಳವಣಿಗೆಯಡಿ 56 ಕೋಟಿ ಜನ್‌ಧನ್ ಖಾತೆಗಳನ್ನು ತೆರೆಯಲಾಗಿದ್ದು, 25 ಕೋಟಿ ಜನರು ಬಡತನ ರೇಖೆಯಿಂದ ಮೇಲಕ್ಕೆ ಬಂದಿದ್ದಾರೆ. ಕಳೆದ ದಶಕಗಳಲ್ಲಿ ಕಾಂಗ್ರೆಸ್ ಸರ್ಕಾರಗಳು ‘ಗರೀಬಿ ಹಠಾವೋ’ ಘೋಷಣೆ ಮಾಡಿದರೂ, ಎನ್‌ಡಿಎ ಸರ್ಕಾರ ನಿಜವಾದ ಸುಧಾರಣೆ ತಂದಿದೆ ಎಂದು ವಿಮರ್ಶಿಸಿದರು.
ಸೆಮಿಕಂಡಕ್ಟರ್ ಕೈಗಾರಿಕೆಯಲ್ಲಿ ಬೆಂಗಳೂರು ಮತ್ತು ಮೈಸೂರು ಮಹತ್ವದ ಪಾತ್ರ ವಹಿಸುತ್ತಿವೆ. ಎಐ ಕ್ರಾಂತಿಗೆ ಅನುಗುಣವಾಗಿ ಬಿ.ಟೆಕ್, ಎಂ.ಟೆಕ್ ಪಠ್ಯಕ್ರಮಗಳಲ್ಲಿ ಬದಲಾವಣೆಗಳು ನಡೆಯುತ್ತಿವೆ ಎಂದು ಶ್ಲಾಘಿಸಿದರು.
ರೈಲ್ವೆ ಇಲಾಖೆಯಡಿ ಕರ್ನಾಟಕಕ್ಕೆ ದಾಖಲೆಯ 7,748 ಕೋಟಿ ರೂ. ಮೊತ್ತ ನೀಡಲಾಗಿದ್ದು, ಇದು ಕಾಂಗ್ರೆಸ್ ಆಡಳಿತದ ಸಮಯದ 800 ಕೋಟಿಗಿಂತ 9 ಪಟ್ಟು ಹೆಚ್ಚು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರು ಪಿ.ಸಿ. ಮೋಹನ್, ಡಾ. ಸಿ.ಎನ್. ಮಂಜುನಾಥ್ ಮತ್ತು ಮಾಜಿ ಸಂಸದ ಮುನಿಸ್ವಾಮಿ ಭಾಗವಹಿಸಿದ್ದರು.












