ಬೆಂಗಳೂರು: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರು ಕರ್ನಾಟಕ ಪ್ರವಾಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿ, ದೂರದರ್ಶನ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಕೇಂದ್ರದ ವಿವಿಧ ವಿಭಾಗಗಳನ್ನು ಪರಿಶೀಲಿಸಿ, ಸಿಬ್ಬಂದಿಯ ಕಾರ್ಯನಿರ್ವಹಣೆಯನ್ನು ವೀಕ್ಷಿಸಿದರು.
ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ದೂರದರ್ಶನ ಕೇಂದ್ರದ ಪ್ರಗತಿ, ಕಾರ್ಯಕ್ರಮಗಳು ಮತ್ತು ತಾಂತ್ರಿಕ ಬದಲಾವಣೆಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ಸ್ವಚ್ಛತೆ ಕಾಪಾಡುವ ಕುರಿತು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಕೇಂದ್ರ ವಾರ್ತಾ ಶಾಖೆ (PIB)ಯ ಹೆಚ್ಚುವರಿ ಮಹಾನಿರ್ದೇಶಕ ಶ್ರೀ ಎಸ್.ಜಿ. ರವೀಂದ್ರ, ದೂರದರ್ಶನ ಕೇಂದ್ರದ ಉಪಮಹಾನಿರ್ದೇಶಕರಾದ ಶ್ರೀ ಹನುಮಂತ್, ಶ್ರೀ ಭಾಗ್ಯವಾನ, ಶ್ರೀ ಬಿ.ಎ. ಕೇಶವಮೂರ್ತಿ, ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ಶ್ರೀಮತಿ ಎಚ್.ಎನ್. ಆರತಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
‘ತಾಯಿಯ ಹೆಸರಿನಲ್ಲಿ ಒಂದು ಗಿಡ’ ಅಭಿಯಾನ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನದಂತೆ, ‘ತಾಯಿಯ ಹೆಸರಿನಲ್ಲಿ ಒಂದು ಗಿಡ’ ಅಭಿಯಾನದಡಿ ಸಚಿವ ಡಾ. ಮುರುಗನ್ ಅವರು ದೂರದರ್ಶನ ಕೇಂದ್ರದ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು. ಈ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಮುಂದಿಟ್ಟರು.












