ಬೆಂಗಳೂರು: ಕೊಡಿಗೆಹಳ್ಳಿಯ ಬಿಬಿಎಂಪಿ ಜಿಮ್ ಬಳಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವಿನ ದ್ವೇಷ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆ. ಈ ಘಟನೆಯ ಹಿಂದೆ ಸುಪಾರಿ ಇರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮುನಿರಾಜು ಮತ್ತು ಚಿಕ್ಕಮುನಿಯಪ್ಪ ಸಹೋದರರು. ಇವರ ನಡುವಿನ ಜಾಗದ ವಿವಾದದಿಂದಾಗಿ ಆಗಾಗ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗೆ ಗಲಾಟೆ ತಾರಕಕ್ಕೇರಿದಾಗ, ಮುನಿರಾಜು ಅವರ ಮಗ ಮುನಿಕುಮಾರ್ ಬುದ್ಧಿವಾದ ಹೇಳಿದ್ದರು. ಆದರೆ, ಈ ವೇಳೆ ಚಿಕ್ಕಮುನಿಯಪ್ಪನ ಅಪ್ರಾಪ್ತ ಪುತ್ರ ಕೊಲೆ ಬೆದರಿಕೆ ಹಾಕಿದ್ದನು ಎಂದು ಆರೋಪಿಸಲಾಗಿದೆ. ಬೆದರಿಕೆಯ ಮೂರನೇ ದಿನವಾದ ಏಪ್ರಿಲ್ 25ರ ಸಂಜೆ, ಮುನಿಕುಮಾರ್ ಜಿಮ್‌ನಿಂದ ಮನೆಗೆ ವಾಪಸಾಗುವಾಗ ರಾತ್ರಿ 7:30ರ ಸುಮಾರಿಗೆ ರಾಡ್ ಮತ್ತು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆಗೆ ಒಳಗಾದರು.
ಹಲ್ಲೆಯಲ್ಲಿ ಚಿಕ್ಕಮುನಿಯಪ್ಪನ ಮಗ, ಅಳಿಯ ಸತೀಶ್, ಭರತ್, ತೇಜಸ್, ಗಣಿ ಮತ್ತು ಒಬ್ಬ ಅಪ್ರಾಪ್ತನೂ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆರಂಭದಲ್ಲಿ ಅಪ್ರಾಪ್ತನಿಂದ ಹಲ್ಲೆ ಆರಂಭವಾಗಿದ್ದು, ನಂತರ ಇತರರು ಕೈ, ಎದೆ, ಸೊಂಟ ಮತ್ತು ಕುತ್ತಿಗೆಗೆ ರಾಡ್ ಹಾಗೂ ಲಾಂಗ್‌ನಿಂದ ತೀವ್ರವಾಗಿ ಹೊಡೆದಿದ್ದಾರೆ. ಮುನಿಕುಮಾರ್ ಜಿಮ್ ಒಳಗೆ ಓಡಿ ಹೋಗಿ, ಸಿಬ್ಬಂದಿಯ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುನಿಕುಮಾರ್ ಅವರ ಪತ್ನಿ ಮಾಲಾ ಅವರು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳಾದ ಸತೀಶ್, ಭರತ್, ತೇಜಸ್, ಗಣಿ ಮತ್ತು ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಹಿಂದೆ ಸತೀಶ್‌ನ ಮಾಸ್ಟರ್ ಪ್ಲ್ಯಾನ್ ಇದೆ ಎಂದು ಇತರ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಅಪ್ರಾಪ್ತರನ್ನು ಬಳಸಿಕೊಂಡು ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಮುನಿಕುಮಾರ್ ಆಟೋ ಚಾಲಕರಾಗಿ ಕುಟುಂಬವನ್ನು ನಡೆಸುತ್ತಿದ್ದು, ಆರು ವರ್ಷದ ಮಗುವಿದ್ದಾರೆ. ಅವರ ಪತ್ನಿ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. “ನಮಗೆ ನ್ಯಾಯ ಕೊಡಿಸಿ” ಎಂದು ಮಾಲಾ ಕೊಡಿಗೆಹಳ್ಳಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಕೊಡಿಗೆಹಳ್ಳಿ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಮುಂದುವರೆದಿದೆ.