ಬೆಂಗಳೂರು, ಮೇ 13: ಬೆಂಗಳೂರಿನ ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕ್ಯಾಮೆರೂನ್ ಮೂಲದ ವಿದೇಶಿ ಪ್ರಜೆಯೊಬ್ಬರಿಂದ ರಾಬರಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ರಿಜ್ವಾನ್ ಪಾಷಾ (25) ಮತ್ತು ಕೃತಿಕ್ ಪ್ರೀತಮ್ (25) ಎಂದು ಗುರುತಿಸಲಾಗಿದೆ.
ಈ ಘಟನೆ ಏಪ್ರಿಲ್ 16 ರಂದು ಭದ್ರಪ್ಪ ಲೇಔಟ್ ಬಳಿ ನಡೆದಿದೆ. ಪ್ಯಾಟ್ರಿಸ್ ಕ್ಯಾಂಡೆಮ್ ಎಂಬ ಕ್ಯಾಮೆರೂನ್ ಮೂಲದ ಪ್ರಜೆ, ಹಣ ಹೊಂದಿದ ಬ್ಯಾಗ್‌ನ್ನು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಆರೋಪಿಗಳು ಮಚ್ಚು ತೋರಿಸಿ ಹೋಂಡಾ ಆ್ಯಕ್ಟೀವಾ ಬೈಕ್ ಅನ್ನು ಎಗರಿಸಿ ಪರಾರಿಯಾಗಿದ್ದರು. ಬಳಿಕ ಅವರು ಹಿಂಬದಿಯಿಂದ ಬಂದು ಪ್ಯಾಟ್ರಿಸ್‌ನ ಬ್ಯಾಗ್‌ನ್ನು ಕೂಡ ದೋಚಿದ್ದರು.
ಕೊಡಿಗೆಹಳ್ಳಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಟಿವಿಎಸ್ ಜುಪಿಟರ್ ಬೈಕ್ ಹಾಗೂ ಎಗರಿಸಲಾದ ಆ್ಯಕ್ಟೀವಾ ಬೈಕ್ ವಶಕ್ಕೆ ಪಡೆದಿದ್ದಾರೆ. ಜೊತೆಗೆ ವಿದೇಶಿ ಪ್ರಜೆಯ ಪಾಸ್‌ಪೋರ್ಟ್ ಮತ್ತು ₹86,000 ನಗದುವೂ ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.