ಮಂಗಳೂರು: ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿರುವಂತೆಯೇ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಚಿತ್ರದ ಧನಾತ್ಮಕ ಜನಪ್ರಿಯತೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ನಶಿಸುತ್ತಿರುವ ಪುರಾತನ ಸಂಸ್ಕೃತಿ ಮತ್ತು ಕಲೆಯನ್ನು ಎತ್ತಿಹಿಡಿಯುವ ‘ಕೊರಗಜ್ಜ’ ರೀತಿಯ ಚಿತ್ರಗಳು ಹೆಚ್ಚೆಚ್ಚು ಬರಲಿ ಎಂದು ಆಶಿಸಿ, ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಶುಭಾಶಯ ತಿಳಿಸಿದ್ದಾರೆ.
ಈ ತಿಂಗಳ 11ರಂದು ಮಂಗಳೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಮಟ್ಟದ ‘ಕೊರಗಜ್ಜ’ ಚಿತ್ರದ ಪತ್ರಿಕಾಗೋಷ್ಠಿ ಮತ್ತು ಸಂಜೆಯ ಅದ್ದೂರಿ ಕೊರಗಜ್ಜ ದೈವದ ಕೋಲಸೇವೆ ಕಾರ್ಯಕ್ರಮದ ಬಗ್ಗೆ ಚಿತ್ರತಂಡವು ಗೃಹ ಸಚಿವರೊಂದಿಗೆ ಚರ್ಚಿಸಿತು. ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸುವ ಪತ್ರಕರ್ತರು, ಸಾವಿರಾರು ಜನರು ಮತ್ತು ಸಿನಿಮಾ ತಾರೆಯರ ಸಮ್ಮುಖದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ವಿಶೇಷ ಭದ್ರತೆ ಕೋರಿ ನಿರ್ದೇಶಕ ಸುಧೀರ್ ಅತ್ತಾವರ್, ಪ್ರಮುಖ ನಟಿ ಭವ್ಯ, ನಿರ್ಮಾಪಕ ತ್ರಿವಿಕ್ರಮ್ ಮತ್ತು ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಅವರು ಮನವಿ ಸಲ್ಲಿಸಿದರು. ಸ್ಥಳೀಯ ಕಿಡಿಕೇಡಿಗಳ ಬೆದರಿಕೆ ಮತ್ತು ಚಿತ್ರೀಕರಣದ ವೇಳೆ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಈ ಬೇಡಿಕೆ ಮುಂದಿಡಲಾಗಿತ್ತು. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಮಂಗಳೂರು ಪೊಲೀಸ್ ಕಮಿಷನರ್‌ಗಳೊಂದಿಗೆ ವಿಷಯ ಚರ್ಚಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ವಿಭಿನ್ನ ಫಸ್ಟ್ ಲುಕ್ ಮತ್ತು 3ಡಿ ಮೋಷನ್ ಪೋಸ್ಟರ್‌ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿವೆ. ದೇಶಾದ್ಯಂತ ಪತ್ರಕರ್ತರನ್ನು ಒಟ್ಟುಗೂಡಿಸಿ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಟ್ರೇಲರ್ ಅಥವಾ ಆಡಿಯೋ ಬಿಡುಗಡೆಯಾಗುವ ಸಾಧ್ಯತೆಯ ಬಗ್ಗೆ ಚರ್ಚೆ ಜೋರಾಗಿದೆ.











