ಕೊಲ್ಲಾಪುರ: ಹರ್ಷ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರಿಗೆ ಭಾರತೀಯ ಶುಗರ್ ಇಂಡಸ್ಟ್ರೀಸ್ ಗ್ರೂಪ್‌ನಿಂದ ಪ್ರತಿಷ್ಠಿತ ‘ಯುಥ್ ಐಕಾನ್ ಆಫ್ ಶುಗರ್ ಇಂಡಸ್ಟ್ರೀ’ ಪ್ರಶಸ್ತಿ ಲಭಿಸಿದೆ.
ಕೊಲ್ಲಾಪುರದ ಮಹಾ ಸೈನಿಕ ದರ್ಬಾರ್ ಹಾಲ್ ಮತ್ತು ಲಾನ್ಸ್‌ನಲ್ಲಿ ಶುಕ್ರವಾರ ಸಂಜೆ ನಡೆದ ಭವ್ಯ ಸಮಾರಂಭದಲ್ಲಿ 2024ರ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಚನ್ನರಾಜ ಹಟ್ಟಿಹೊಳಿ ಅವರು ಕಾರ್ಖಾನೆಯ ಸಿಬ್ಬಂದಿಯೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಭಾರತೀಯ ಶುಗರ್ ಗ್ರೂಪ್‌ನ 49ನೇ ವಾರ್ಷಿಕ ಸಭೆ ಮತ್ತು ವಿಚಾರ ಸಂಕಿರಣವೂ ನಡೆಯಿತು.
ಸಕ್ಕರೆ ಉತ್ಪಾದನೆ, ಉಪ-ಉತ್ಪನ್ನಗಳು, ತಂತ್ರಜ್ಞಾನ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಚನ್ನರಾಜ ಹಟ್ಟಿಹೊಳಿ ಅವರ ನವೀನ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಾಧನೆಯ ಹಿಂದಿರುವ ರೈತರು, ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ ಚನ್ನರಾಜ ಹಟ್ಟಿಹೊಳಿ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಪ್ರಶಸ್ತಿ ಸಕ್ಕರೆ ಉದ್ಯಮದಲ್ಲಿ ಯುವ ನಾಯಕತ್ವ ಮತ್ತು ಸೃಜನಶೀಲತೆಯನ್ನು ಗೌರವಿಸುವ ಒಂದು ಮಹತ್ವದ ಸಂದರ್ಭವಾಗಿದೆ.