ಬೆಂಗಳೂರು: “ಕೋಗಿಲು ಉಳಿಸಿ ಅಕ್ರಮ ವಲಸಿಗರನ್ನು ತೊಲಗಿಸಿ” ಎಂಬ ಘೋಷವಾಕ್ಯದೊಂದಿಗೆ ಬಾಗಲೂರು ಮುಖ್ಯ ರಸ್ತೆಯ ಕಂಟ್ರಿ ಕ್ಲಬ್ ಹತ್ತಿರ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿಯಾದ ಮನೆಗಳನ್ನು ತೆರವುಗೊಳಿಸಿದ ನಂತರ ಅಲ್ಲಿನ ನಿವಾಸಿಗಳಿಗೆ ಪರ್ಯಾಯ ವಸತಿ ನೀಡುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಖಂಡಿಸಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, “ಕರ್ನಾಟಕವನ್ನು ಬಾಂಗ್ಲಾದೇಶ ಮಾಡಲು ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಅಕ್ರಮ ವಲಸಿಗರಿಗೆ ಮನೆ ನೀಡುವುದು ಅಕ್ಷಮ್ಯ ಅಪರಾಧ. ಇದನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ಕಾಂಗ್ರೆಸ್ ಹೈಕಮಾಂಡ್‌ನ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು. “ಕೆ.ಸಿ. ವೇಣುಗೋಪಾಲ್ ಅವರ ಧಮಕಿಗೆ ಹೆದರಿ ಸಿಎಂ ಕುರ್ಚಿ ಉಳಿಸಿಕೊಳ್ಳಲು ಅಕ್ರಮ ವಲಸಿಗರಿಗೆ ಮನೆ ನೀಡಲಾಗುತ್ತಿದೆ. ಕರ್ನಾಟಕದ ಜನರು ಪ್ರಶ್ನಿಸುತ್ತಿದ್ದಾರೆ – ಕೆ.ಸಿ. ವೇಣುಗೋಪಾಲ್‌ರೇ ಕರ್ನಾಟಕದ ಮುಖ್ಯಮಂತ್ರಿಯೇ?” ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ 38 ಲಕ್ಷ ಜನರು ಮನೆಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷದಲ್ಲಿ ಒಂದು ಮನೆಯೂ ನೀಡಿಲ್ಲ ಎಂದು ಟೀಕಿಸಿದ ಅವರು, “ಡಾ. ಬಾಬಾಸಾಹೇಬ ಅಂಬೇಡ್ಕರ್ ಹೆಸರು ಹೇಳುವ ಸರ್ಕಾರ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಲಂಚ ಪಡೆದು ಅಕ್ರಮ ವಲಸಿಗರಿಗೆ ನೀರು, ವಿದ್ಯುತ್ ಸಂಪರ್ಕ ನೀಡಿ ಕರ್ನಾಟಕವನ್ನು ಬಾಂಗ್ಲಾದೇಶ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, “ಬಾಂಗ್ಲಾದೇಶದಿಂದ ಬಂದ ರೋಹಿಂಗ್ಯಾಗಳಿಗೆ ಮನೆ ನೀಡಲು ಯಾರು ಅಧಿಕಾರ ನೀಡಿದ್ದಾರೆ? ಕೇರಳದವರು ಬಂದು ವಿವರ ಪಡೆದು ಹೋದರು, ಅವರನ್ನು ಬಂಧಿಸಬೇಕಿತ್ತು” ಎಂದು ಪ್ರಶ್ನಿಸಿದರು.
ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು, “ಕಾಂಗ್ರೆಸ್ ಸರ್ಕಾರಕ್ಕೆ ಆತ್ಮಸ್ಥೈರ್ಯ, ಸ್ವಾಭಿಮಾನ ಇಲ್ಲ. ತೆರವು ಮಾಡಿದ ಮನೆಗಳನ್ನು 24 ಗಂಟೆಯೊಳಗೆ ಮತ್ತೆ ನೀಡುವುದು ಅನೈತಿಕ ಮತ್ತು ಕಾನೂನು ವಿರೋಧಿ” ಎಂದು ಖಂಡಿಸಿದರು.
ಪ್ರತಿಭಟನೆಯಲ್ಲಿ ವಿರೋಧ ಪಕ್ಷ ನಾಯಕ ಆರ್. ಅಶೋಕ್, ಎನ್. ರವಿಕುಮಾರ್, ಕೆ. ಗೋಪಾಲಯ್ಯ, ಎಸ್.ಆರ್. ವಿಶ್ವನಾಥ್, ಎನ್. ಮುನಿರತ್ನ, ಸಿ.ಟಿ. ರವಿ, ಸಿ.ಕೆ. ರಾಮಮೂರ್ತಿ, ಭಾರತಿ ಶೆಟ್ಟಿ ಸೇರಿದಂತೆ ಹಲವು ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.












