ಬೆಂಗಳೂರು, ಮೇ 30: ಕರಾವಳಿ ಭಾಗದಲ್ಲಿ ಕೋಮುಗಲಭೆಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕರ್ನಾಟಕ ರಾಜ್ಯಕ್ಕೆ ಭಾರೀ ನಷ್ಟವಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಶುಕ್ರವಾರ ವಿಧಾನಸೌಧ ಆವರಣ ಹಾಗೂ ಅರಮನೆ ಮೈದಾನದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಗಲಭೆಗಳಿಂದ ಕರಾವಳಿಯ ಶಾಂತಿಗೆ ಭಂಗವಾಗುತ್ತಿದ್ದು, ಬಂಡವಾಳ ಹೂಡಿಕೆದಾರರು ಹಿಂಜರಿಯುತ್ತಿರುವುದು ಆತಂಕಕಾರಿ ಎಂದರು.
“ಕೋಮುಗಲಭೆಗಳಿಂದ ಕರಾವಳಿ ಭಾಗಕ್ಕೆ ಕೊಡಲಿಪೆಟ್ಟು ಬಿದ್ದಿದೆ. ಇದು ಕೇವಲ ಒಂದೆರಡು ಸಾವಿನ ವಿಷಯವಲ್ಲ, ಇಡೀ ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಹೊಡೆತವಾಗಿದೆ. ಜನರು ಆತಂಕಕ್ಕೊಳಗಾಗುತ್ತಿದ್ದಾರೆ, ಹೂಡಿಕೆದಾರರು ದೂರವಾಗುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಬಿಜೆಪಿ ಮತ್ತು ಇತರ ಸಂಘಟನೆಗಳು ಅರಿತುಕೊಂಡು ಶಾಂತಿ ಸ್ಥಾಪನೆಗೆ ಸಹಕರಿಸಬೇಕು” ಎಂದು ಶಿವಕುಮಾರ್ ಮನವಿ ಮಾಡಿದರು.
ಸರ್ಕಾರ ಎಲ್ಲಾ ಸಮುದಾಯಗಳ ರಕ್ಷಣೆಗೆ ಕ್ರಮ ಕೈಗೊಂಡಿದೆ ಎಂದ ಅವರು, ಕಾಂಗ್ರೆಸ್ ಪಕ್ಷದ ವತಿಯಿಂದ ಒಂದು ತಂಡವನ್ನು ಕರಾವಳಿಗೆ ಕಳುಹಿಸಿ ಸಾರ್ವಜನಿಕರ ಜತೆ ಚರ್ಚಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದರು. “ಅಧಿಕಾರಿಗಳ ವರದಿಯ ಜತೆಗೆ, ಜನರಿಂದ ನೇರವಾಗಿ ಮಾಹಿತಿ ಪಡೆಯಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಕರಾವಳಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ, “ಬಿಜೆಪಿ ಮತ್ತು ಕೆಲವು ಸಂಘಟನೆಗಳು ಕರ್ನಾಟಕದಲ್ಲಿ ಕೋಮು ಪ್ರಚೋದನೆ ಮಾಡುತ್ತಿವೆ. ಇದರಿಂದ ರಾಜ್ಯಕ್ಕೆ ಮತ್ತು ದಕ್ಷಿಣ ಕನ್ನಡಕ್ಕೆ ನಷ್ಟವಾಗುತ್ತಿದೆ. ಅಲ್ಲಿನ ಪ್ರತಿಭಾವಂತ ಯುವಕರು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ, ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ನಾವು ಉದ್ಯೋಗ ಸೃಷ್ಟಿಗೆ ಪ್ರಯತ್ನಿಸುತ್ತಿದ್ದೇವೆ” ಎಂದು ಶಿವಕುಮಾರ್ ಹೇಳಿದರು.
ಅಧಿಕಾರಿಗಳು ಸ್ಥಳೀಯವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಕ್ಕೆ, “ನಮ್ಮ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಾರೆ” ಎಂದು ಭರವಸೆ ನೀಡಿದರು.
ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ ವಿಷಯಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ನ ಟ್ವೀಟ್ ಬಗ್ಗೆ ಕೇಳಿದಾಗ, “ಅವರ ಪಕ್ಷದವರು ಗಾಬರಿಯಾಗುವ ಅಗತ್ಯವಿಲ್ಲ. ಅವರು ಎರಡು ಪಕ್ಷಗಳ ಒಕ್ಕೂಟದಲ್ಲಿದ್ದಾರೆ. ಜನ, ಕಾರ್ಯಕರ್ತರು, ಮುಖಂಡರು ನಮ್ಮ ಜತೆ ಸೇರಲು ಆಸಕ್ತರಾಗಿದ್ದಾರೆ. ಅವರನ್ನು ತಿರಸ್ಕರಿಸಲು ಸಾಧ್ಯವೇ?” ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು.
ಕರಾವಳಿಯ ಶಾಂತಿ ಮತ್ತು ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಡಿಸಿಎಂ, ಎಲ್ಲರ ಸಹಕಾರದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.












