ಬೆಂಗಳೂರು: ಕ್ಯಾಂಪ್ಕೋ ಸಂಸ್ಥೆಯಿಂದ ಸಂಗ್ರಹಿಸುವ ಮಾರುಕಟ್ಟೆ ಶುಲ್ಕವನ್ನು ಈ ಹಿಂದಿನಂತೆ ಶೇ. 48ರಷ್ಟು ಮುಂದುವರಿಸುವ ಬೇಡಿಕೆಯನ್ನು ಪರಿಗಣಿಸುವುದಾಗಿ ಕೃಷಿ ಮಾರುಕಟ್ಟೆ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದ್ದಾರೆ.
ಗುರುವಾರ ಬೆಂಗಳೂರಿನ ಕೃಷಿ ಮಾರಾಟ ಇಲಾಖೆ ಕಚೇರಿಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ನೇತೃತ್ವದ ನಿಯೋಗವನ್ನು ಭೇಟಿಯಾದ ಸಚಿವರು, ಸಂಸ್ಥೆಯ ಚಟುವಟಿಕೆಗಳು, ವಾರ್ಷಿಕ ವಹಿವಾಟು ಮತ್ತು ಕಾರ್ಯವ್ಯಾಪ್ತಿಯ ಬಗ್ಗೆ ಮಾಹಿತಿ ಪಡೆದರು. ಕ್ಯಾಂಪ್ಕೋದ ಚಟುವಟಿಕೆಗಳನ್ನು ಮೆಚ್ಚಿಕೊಂಡ ಅವರು, ಶೇ. 48ರಷ್ಟು ಮಾರುಕಟ್ಟೆ ಶುಲ್ಕವನ್ನು ಆಕರಣೆ ಮಾಡುವ ಬೇಡಿಕೆಯನ್ನು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕ್ಯಾಂಪ್ಕೋ ಈಗ ಬಹುರಾಜ್ಯ ಸಹಕಾರ ಸಂಘಗಳ ಅಧಿನಿಯಮದಡಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಮಾರುಕಟ್ಟೆ ಶುಲ್ಕವನ್ನು ಶೇ. 48ರಿಂದ ಶೇ. 60ಕ್ಕೆ ಏರಿಕೆ ಮಾಡಲಾಗಿತ್ತು. ಇದರ ವಿರುದ್ಧ ಕ್ಯಾಂಪ್ಕೋ ನಿಯೋಗವು ಸಚಿವರಿಗೆ ಮನವಿ ಸಲ್ಲಿಸಿ, ಈ ಹಿಂದಿನ ಶೇ. 48ರ ಶುಲ್ಕವನ್ನೇ ಮುಂದುವರಿಸುವಂತೆ ಕೋರಿತು.
ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಅಧಿನಿಯಮದಡಿ 1973ರಲ್ಲಿ ಸ್ಥಾಪನೆಯಾದ ಕ್ಯಾಂಪ್ಕೋ, ಕೇರಳ ಸೇರಿದಂತೆ ಇತರ ರಾಜ್ಯಗಳಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸಿದೆ. ಮಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆ, ಎಪಿಎಂಸಿಗೆ ವಾರ್ಷಿಕ ಸುಮಾರು 9 ಕೋಟಿ ರೂ. ಮಾರುಕಟ್ಟೆ ಶುಲ್ಕವನ್ನು ಪಾವತಿಸುತ್ತಿದೆ. ರಾಜ್ಯದ 66 ಶಾಖೆಗಳ ಮೂಲಕ ರೈತರಿಗೆ ಸೇವೆ ಸಲ್ಲಿಸುತ್ತಿರುವ ಕ್ಯಾಂಪ್ಕೋ, 1,48,381 ಸದಸ್ಯರನ್ನು ಹೊಂದಿದ್ದು, ಇವರಲ್ಲಿ ಶೇ. 85ರಷ್ಟು ಕರ್ನಾಟಕದವರೇ ಆಗಿದ್ದಾರೆ.
ಕ್ಯಾಂಪ್ಕೋ ರಾಜ್ಯ ಸರ್ಕಾರದ ನೋಡಲ್ ಏಜನ್ಸಿಯಾಗಿ ಕಾರ್ಯನಿರ್ವಹಿಸಿ, 2002, 2004 ಮತ್ತು 2009ರಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ರಾಜ್ಯದ ಹಲವು ಶಾಖೆಗಳು ಎಪಿಎಂಸಿ ವಲಯದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ನಿಯಮಾನುಸಾರ ಮಾರುಕಟ್ಟೆ ಶುಲ್ಕವನ್ನು ಕಾಲಕಾಲಕ್ಕೆ ಪಾವತಿಸುತ್ತಿವೆ.
ಸಚಿವರೊಂದಿಗಿನ ಭೇಟಿಯಲ್ಲಿ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ. ಸತ್ಯನಾರಾಯಣ ಮತ್ತು ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ ಉಪಸ್ಥಿತರಿದ್ದರು.