ಬೆಂಗಳೂರು: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಖಾರಿಫ್ 2025 (ಏಪ್ರಿಲ್ 1 ರಿಂದ ಸೆಪ್ಟೆಂಬರ್ 30, 2025) ಕಾಲಘಟ್ಟಕ್ಕೆ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ & ಕೆ) ರಸಗೊಬ್ಬರಗಳ ಮೇಲೆ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್) ದರಗಳಿಗೆ ಅನುಮೋದನೆ ನೀಡಲಾಗಿದೆ.
ಈ ನಿರ್ಧಾರದಿಂದ ದೇಶದ ರೈತರಿಗೆ ಎನ್‌ಪಿಕೆಎಸ್ ಶ್ರೇಣಿಗಳನ್ನು ಒಳಗೊಂಡಂತೆ ಅಧಿಸೂಚಿತ ಪಿ & ಕೆ ರಸಗೊಬ್ಬರಗಳು ಸಬ್ಸಿಡಿಯೊಂದಿಗೆ, ಕೈಗೆಟುಕುವ ಹಾಗೂ ಸಮಂಜಸವಾದ ದರದಲ್ಲಿ ಲಭ್ಯವಾಗಲಿವೆ. ಅಲ್ಲದೇ, ಸಿಂಗಲ್ ಸೂಪರ್ ಫಾಸ್ಫೇಟ್ (ಎಸ್‌ಎಸ್‌ಪಿ) ಮೇಲಿನ ಸರಕು ಸಬ್ಸಿಡಿಯು ಕೂಡ ಖಾರಿಫ್ 2025 ರವರೆಗೆ ವಿಸ್ತರಿಸಲಾಗಿದೆ.
ಸಬ್ಸಿಡಿಗೆ ಅನುಮೋದನೆ:
ಖಾರಿಫ್ 2025ಕ್ಕೆ 37,216.15 ಕೋಟಿ ರೂ.ಗಳ ಎನ್‌ಬಿಎಸ್ ಸಬ್ಸಿಡಿಗೆ ಸಂಪುಟದ ಅನುಮೋದನೆ ದೊರೆತಿದ್ದು, ಇದು 2024-25ರ ರಬಿ ಋತುವಿನ ಬಜೆಟ್ ಅವಶ್ಯಕತೆಯಿಗಿಂತ ಅಂದಾಜು 13,000 ಕೋಟಿ ರೂ. ಹೆಚ್ಚಾಗಿದೆ. ಈ ಮೂಲಕ ಸರ್ಕಾರದ ಕೃಷಿ ವಲಯ ಹಾಗೂ ರೈತರ ಕಲ್ಯಾಣದತ್ತದ ಬದ್ಧತೆಯನ್ನು ಮತ್ತಷ್ಟು ದೃಢಪಡಿಸಿದೆ.
ಪ್ರಮುಖ ಪ್ರಯೋಜನಗಳು:
- ರೈತರಿಗೆ ಅಗತ್ಯವಿರುವ ಪೋಷಕಾಂಶಗಳನ್ನು ನ್ಯಾಯಸಮ್ಮತ ಬೆಲೆಯಲ್ಲಿ ಒದಗಿಸುವ ಮೂಲಕ, ಮಣ್ಣಿನ ಆರೋಗ್ಯವನ್ನು ರಕ್ಷಿಸಿ, ಉತ್ತಮ ಫಲವತ್ತತೆ ಮತ್ತು ಆಹಾರ ಭದ್ರತೆಗೆ ನೆರವಾಗುತ್ತದೆ.
- ಇತ್ತೀಚಿನ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗಳನ್ನು ಆಧಾರವನ್ನಾಗಿ ಮಾಡಿಕೊಂಡು, ಸಬ್ಸಿಡಿ ದರಗಳನ್ನು ತರ್ಕಬದ್ಧಗೊಳಿಸಲಾಗಿದೆ.
- ದೇಶದಾದ್ಯಂತ ಪಿ & ಕೆ ರಸಗೊಬ್ಬರಗಳ ಲಭ್ಯತೆಯನ್ನು ಸುಗಮಗೊಳಿಸುವುದು ಮುಖ್ಯ ಗುರಿಯಾಗಿದ್ದು, ರೈತರು ಯಾವುದೇ ಅಸಮತೋಲನಕ್ಕೀಡಾಗದೆ ತಕ್ಕಮಟ್ಟದ ಬೆಲೆಯಲ್ಲಿ ರಸಗೊಬ್ಬರಗಳನ್ನು ಪಡೆಯಲಿದ್ದಾರೆ.
ಹಿನ್ನೆಲೆ:
ಕೇಂದ್ರ ಸರ್ಕಾರವು 2010ರ ಏಪ್ರಿಲ್ 1 ರಿಂದ ಎನ್‌ಬಿಎಸ್ ಯೋಜನೆಯ ಮೂಲಕ 28 ಶ್ರೇಣಿಗಳ ಪಿ & ಕೆ ರಸಗೊಬ್ಬರಗಳಿಗೆ ಸಬ್ಸಿಡಿಯನ್ನು ನೀಡುತ್ತಿದೆ. ಉರೆಾ, ಡಿಎಪಿ, ಎಂಒಪಿ ಹಾಗೂ ಗಂಧಕದಂತೆಯೇ ಪಿ & ಕೆ ರಸಗೊಬ್ಬರಗಳ ಅಂತಾರಾಷ್ಟ್ರೀಯ ಬೆಲೆಗಳಲ್ಲಿ ಕಂಡುಬರುವ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು, ರೈತರ ಅನುಕೂಲಕ್ಕೆ ತಕ್ಕಂತೆ ಸಬ್ಸಿಡಿಯನ್ನು ಅನುಸರಿಸಿ ನಿಗದಿಪಡಿಸಲಾಗಿದೆ.
ಈ ಹೊಸ ಎನ್‌ಬಿಎಸ್ ದರಗಳು ಖಾರಿಫ್ 2025 ರ ಅವಧಿಗೆ (01.04.2025 ರಿಂದ 30.09.2025 ರವರೆಗೆ) ಅನ್ವಯವಾಗಲಿದ್ದು, ಕಂಪನಿಗಳಿಗೆ ಅನುಮೋದಿತ ಮತ್ತು ಅಧಿಸೂಚಿತ ದರಗಳ ಪ್ರಕಾರ ಸಬ್ಸಿಡಿ ನೀಡಲಾಗುವುದು. ಇದರಿಂದ ರೈತರಿಗೆ ರಸಗೊಬ್ಬರಗಳು ಸಮಂಜಸ ಬೆಲೆಯಲ್ಲಿ ಲಭ್ಯವಾಗುವಂತಾಗಲಿದೆ.