ಬೆಂಗಳೂರು: ಬೆಂಗಳೂರು ಉತ್ತರ ನಗರಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಇಂದು ಮುಂಜಾನೆ ಯಲಹಂಕ ಏರ್ಪೋರ್ಟ್ ರಸ್ತೆಯನ್ನು ತಪಾಸಣೆ ನಡೆಸಿ, ಖಾಲಿ ನಿವೇಶನಗಳಲ್ಲಿರುವ ತ್ಯಾಜ್ಯ ಮತ್ತು ಬ್ಲಾಕ್ ಸ್ಪಾಟ್‌ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಕಾರ್ಯಕ್ಕೆ ತಗಲುವ ವೆಚ್ಚವನ್ನು ಆಸ್ತಿ ಮಾಲೀಕರಿಂದ ದಂಡ ರೂಪದಲ್ಲಿ ಅಥವಾ ಆಸ್ತಿ ತೆರಿಗೆಯಲ್ಲಿ ಸೇರಿಸಿ ವಸೂಲಿ ಮಾಡುವಂತೆ ಸೂಚಿಸಿದರು.
ಪುಲಿಕೇಶಿನಗರ, ಬ್ಯಾಟರಾಯನಪುರ ಮತ್ತು ಸರ್ವಜ್ಞನಗರ ವಿಭಾಗಗಳ ಗಡಿ ಪ್ರದೇಶಗಳಲ್ಲಿ ಹಲವು ಖಾಲಿ ನಿವೇಶನಗಳು ತಕರಾರು ಸ್ವತ್ತುಗಳಾಗಿದ್ದು, ಮಾಲೀಕರು ಲಭ್ಯವಿಲ್ಲದ ಕಾರಣ ತ್ಯಾಜ್ಯ ತೆರವುಗೊಳಿಸಿ ವೆಚ್ಚವನ್ನು ಆಸ್ತಿ ತೆರಿಗೆಗೆ ಸೇರಿಸಿ, ತಕರಾರು ಪ್ರಕರಣ ಇತ್ಯರ್ಥಗೊಂಡ ನಂತರ ಮಾಲೀಕರಿಂದ ವಸೂಲಿ ಮಾಡುವಂತೆ ಆಯುಕ್ತರು ತಿಳಿಸಿದರು.
ತಪಾಸಣೆ ವೇಳೆಯ ಪ್ರಮುಖ ನಿರ್ದೇಶನಗಳು
- ಜಕ್ಕೂರು ಡಬಲ್ ರಸ್ತೆ: ಆಯುಕ್ತರು ಸ್ಥಳ ಪರಿಶೀಲಿಸಿ, ಕಸ ಮತ್ತು ಕಟ್ಟಡ ಅವಶೇಷಗಳನ್ನು ತೆರವುಗೊಳಿಸಲು ತಕ್ಷಣ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುವಂತೆ ನಿರ್ದೇಶಿಸಿದರು. ಪ್ರದೇಶದ ಸೌಂದರ್ಯೀಕರಣ ಕಾರ್ಯಗಳನ್ನೂ ಕೈಗೊಳ್ಳುವಂತೆ ಸೂಚಿಸಿದರು.
- ನಾಗವಾರ ಸಿಗ್ನಲ್ ಹತ್ತಿರ: ಸರ್ವಜ್ಞನಗರ, ಬ್ಯಾಟರಾಯನಪುರ ಮತ್ತು ಪುಲಕೇಶಿನಗರ ವಿಭಾಗಗಳ ಗಡಿ ಭಾಗದಲ್ಲಿ ಹಿರಿಯ ನಾಗರಿಕರು ಸ್ವಚ್ಛತೆ ಕೊರತೆಯ ಬಗ್ಗೆ ದೂರು ನೀಡಿದ್ದರು. ಆಯುಕ್ತರು ಸ್ಥಳದಲ್ಲೇ ಗಡಿ ಸಮಸ್ಯೆಗಳನ್ನು ಪರಿಹರಿಸಿ, ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಆದೇಶಿಸಿದರು.
ಖಾಲಿ ಜಾಗಗಳಲ್ಲಿ ತ್ಯಾಜ್ಯ ಸುರಿದಿರುವುದನ್ನು ಗಮನಿಸಿದ ಆಯುಕ್ತರು, ಸ್ಥಳಗಳನ್ನು ತಕ್ಷಣ ಸ್ವಚ್ಛಗೊಳಿಸಿ, ಮಾಲೀಕರಿಂದ ದಂಡ ಹಾಗೂ ಸ್ವಚ್ಛತಾ ಶುಲ್ಕ ವಿಧಿಸಿ ಆಸ್ತಿ ತೆರಿಗೆಗೆ ಸೇರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬ್ಲ್ಯಾಕ್ ಸ್ಪಾಟ್ ತೆರವಿಗೆ ಸೂಚನೆ
ಅಲ್ಲಾಳಸಂದ್ರ ಏರ್ಪೋರ್ಟ್ ರಸ್ತೆ ಮೇಲ್ಸೇತುವೆ (ಫ್ಲೈಓವರ್) ಪ್ರದೇಶವನ್ನು ಪರಿಶೀಲಿಸಿದ ಆಯುಕ್ತರು, ಬ್ಲ್ಯಾಕ್ ಸ್ಪಾಟ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ತಕ್ಷಣ ಅಭಿಯಾನ ಕೈಗೊಳ್ಳುವಂತೆ ಆದೇಶಿಸಿದರು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನೂ ಸೂಚಿಸಿದರು.
ಬ್ಲ್ಯಾಕ್ ಸ್ಪಾಟ್ ತೆರವುಗೊಳಿಸಿದ ಸ್ಥಳಗಳಲ್ಲಿ ಮತ್ತೆ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟಲು ಶಾಶ್ವತ ಪರಿಹಾರಗಳನ್ನು ಕಂಡುಕೊಂಡು ಕ್ರಮ ವಹಿಸುವಂತೆ ತಿಳಿಸಿದರು. ಜತೆಗೆ, ಮನೆಮನೆ ಕಸ ಸಂಗ್ರಹಣೆಯನ್ನು ನಿಗಧಿತ ಸಮಯದಲ್ಲಿ ಸಮರ್ಪಕವಾಗಿ ನಡೆಸುವಂತೆ ನಿರ್ದೇಶಿಸಿದರು.
ತಕ್ಷಣ ಕಾರ್ಯಾಚರಣೆ
ಆಯುಕ್ತರ ನಿರ್ದೇಶನದ ಮೇರೆಗೆ ಘನತ್ಯಾಜ್ಯ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ತ್ಯಾಜ್ಯ ತೆರವುಗೊಳಿಸಿ ವಿಲೇವಾರಿ ಮಾಡಿದ್ದಾರೆ.
ತಪಾಸಣೆಯಲ್ಲಿ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಘನತ್ಯಾಜ್ಯ ವಿಭಾಗದ ಸಹಾಯಕ ಜನರಲ್ ಮ್ಯಾನೇಜರ್‌ಗಳಾದ ಪಾವನ, ಮಮತಾ ಮತ್ತು ತೀರ್ಥ ಪ್ರಸಾದ್ ಸೇರಿದಂತೆ ಇತರ ಸಿಬ್ಬಂದಿಗಳು ಹಾಜರಿದ್ದರು.











