ಭಾರತ-ಪಾಕಿಸ್ತಾನ ಗಡಿಯಲ್ಲಿ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ದೇಶದ ಪ್ರಮುಖ ಧಾರ್ಮಿಕ ಮಂದಿರಗಳು, ಐತಿಹಾಸಿಕ ಕಟ್ಟಡಗಳು, ಅಣೆಕಟ್ಟುಗಳು, ಸೇನೆಗೆ ಸಂಬಂಧಿಸಿದ ನೆಲೆಗಳು ಹಾಗೂ ವೈಜ್ಞಾನಿಕ ಸಂಶೋಧನಾ ಕೇಂದ್ರಗಳಿಗೆ ಕಠಿಣ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಲಾಳು ಗ್ರಾಮದಲ್ಲಿರುವ ಇಸ್ರೋ ರೆಡಾರ್ ಘಟಕದ ಭದ್ರತೆ ಮತ್ತಷ್ಟು ಬಿಗುಗೊಳಿಸಲಾಗಿದೆ. ಚಂದ್ರಯಾನ-1 ಯೋಜನೆ ನಿರ್ವಹಣೆಗೆ ಬಳಸಲಾಗಿದ್ದ ಈ ರೆಡಾರ್ ಘಟಕದ ಸುತ್ತಮುತ್ತ ಪೊಲೀಸ್ ಕಾವಲು ಬಿಗಿಗೊಳಿಸಲಾಗಿದೆ.
ಪೊಲೀಸರು ಗ್ರಾಮಸ್ಥರ ಮನೆಗಳಿಗೆ ತೆರಳಿ, ಯಾವುದೇ ಅನುಮಾನಾಸ್ಪದ ಚಲನವಲನಗಳು ಕಂಡುಬಂದರೆ ತಕ್ಷಣ ತಾವರೆಕೆರೆ ಠಾಣೆ ಅಥವಾ CISF ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಗ್ರಾಮದಲ್ಲಿ ರಾತ್ರಿ ಗಸ್ತು, ನಿಗಾ ಕಮಾಂಡೋ ಪಡೆ, ಮತ್ತು ಸಿಸಿಟಿವಿ ಕವಚ ವ್ಯವಸ್ಥೆಗಳ ಮೂಲಕ ಭದ್ರತೆ ಒದಗಿಸಲಾಗಿದೆ.
ಈ ಕ್ರಮದಿಂದಾಗಿ ರಾಷ್ಟ್ರೀಯ ಭದ್ರತೆಗೆ ಕಂಟಕವಾಗಬಹುದಾದ ಯಾವುದೇ ಶಂಕಾಸ್ಪದ ಚಟುವಟಿಕೆಗಳನ್ನು ತಡೆಹಿಡಿಯುವ ಉದ್ದೇಶವಿದೆ. ಹೀಗಾಗಿ, ನಾಗರಿಕರು ಸಹಕಾರ ನೀಡುವಂತೆ ಅಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.