ಮೆಹ್ಸಾನಾ: ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಗುಜರಾತ್‌ನ ಮೆಹ್ಸಾನಾದ ಗಣಪತ್ ವಿಶ್ವವಿದ್ಯಾಲಯದಲ್ಲಿ ಆಯೋಜಿತವಾದ ‘ವೈಬ್ರೆಂಟ್ ಗುಜರಾತ್’ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತದಲ್ಲಿ ಸೌರಶಕ್ತಿ ಕ್ರಾಂತಿಯ ಯಶಸ್ಸನ್ನು ಶ್ಲಾಘಿಸಿದ ಅವರು, ಗುಜರಾತ್‌ನ ಶುದ್ಧ ಇಂಧನ ಕ್ಷೇತ್ರದ ಸಾಧನೆಗಳನ್ನು ಹೊಗಳಿದರು.
ಗುಜರಾತ್ ತನ್ನ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ.60ರಷ್ಟನ್ನು ನವೀಕರಿಸಬಹುದಾದ ಇಂಧನದಿಂದ ಪಡೆಯುತ್ತಿದೆ ಎಂದು ಸಚಿವರು ತಿಳಿಸಿದರು. 2014ರಲ್ಲಿ ದೇಶದ ಸೌರ ವಿದ್ಯುತ್ ಉತ್ಪಾದನೆ ಕೇವಲ 2.8 ಗಿಗಾವ್ಯಾಟ್ ಆಗಿದ್ದರೆ, ಇಂದು ಅದು 125 ಗಿಗಾವ್ಯಾಟ್‌ಗೆ ಏರಿಕೆಯಾಗಿದೆ ಎಂದು ಅವರು ವಿವರಿಸಿದರು. ಪ್ರಧಾನಮಂತ್ರಿ ಮೋದಿ ಅವರು 25 ವರ್ಷಗಳ ಹಿಂದೆ ಸೌರಶಕ್ತಿ ಯೋಜನೆಯನ್ನು ಆರಂಭಿಸಿದಾಗ, ಪ್ರತಿ ಯೂನಿಟ್ ವಿದ್ಯುತ್‌ಗೆ 18-20 ರೂ. ವೆಚ್ಚವಾಗುತ್ತಿತ್ತು. ಆದರೆ ಇಂದು, ಮಧ್ಯಪ್ರದೇಶದಲ್ಲಿ ಸೌರ ವಿದ್ಯುತ್‌ನ ಪ್ರತಿ ಯೂನಿಟ್ ಬೆಲೆ ಕೇವಲ 2.15 ರೂ.ಗೆ ಇಳಿದಿದೆ. ಬ್ಯಾಟರಿ ಸಂಗ್ರಹಣೆಯೊಂದಿಗೆ ಸಹ, ಇದು 2.70 ರೂ.ಗೆ ಸೀಮಿತವಾಗಿದೆ ಎಂದು ಜೋಶಿ ತಿಳಿಸಿದರು.

ಮೆಹ್ಸಾನಾದ ಮೊಧೇರಾ ಗ್ರಾಮವನ್ನು ಶುದ್ಧ ಇಂಧನದ ದಾರಿದೀಪ ಎಂದು ಕೊಂಡಾಡಿದ ಸಚಿವರು, ಈ ಗ್ರಾಮವು ದಿನದ 24 ಗಂಟೆಯೂ ಶುದ್ಧ ವಿದ್ಯುತ್ ಉತ್ಪಾದಿಸುವ ವಿಶ್ವದ ಏಕೈಕ ಗ್ರಾಮವಾಗಿದೆ ಎಂದು ಹೇಳಿದರು. ಇದು ಗುಜರಾತ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಒತ್ತಿಹೇಳಿದರು.
ಹವಾಮಾನ ಬದಲಾವಣೆಯ ಸವಾಲಿನ ಬಗ್ಗೆ ಎಚ್ಚರಿಕೆ ನೀಡಿದ ಜೋಶಿ, ಕೈಗಾರಿಕಾ ಕ್ರಾಂತಿಯ ನಂತರ ಭೂಮಿಯ ತಾಪಮಾನ 1.1 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ. ಇದರಿಂದ ಹಿಮಕರಡಿ, ಹಿಮನರಿ ಮುಂತಾದ ಜೀವಿಗಳು ಅಳಿವಿನಂಚಿನಲ್ಲಿವೆ. ಮುಂದಿನ 7 ವರ್ಷಗಳಲ್ಲಿ ತಾಪಮಾನ 1.5 ಡಿಗ್ರಿಗಳಷ್ಟು ಏರಿಕೆಯಾದರೆ, ಪರಿಸ್ಥಿತಿ ಗಂಭೀರವಾಗಬಹುದು ಎಂದು ಅವರು ಎಚ್ಚರಿಸಿದರು.
ಯುವಕರು ಮತ್ತು ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿದ ಸಚಿವರು, ಭೂಮಿಯನ್ನು ಮತ್ತು ಜೀವವೈವಿಧ್ಯತೆಯನ್ನು ರಕ್ಷಿಸುವ ಸಮಯ ಇದೀಗ ಬಂದಿದೆ ಎಂದರು. ಗುಜರಾತ್‌ನ ಸೌರಶಕ್ತಿ ಉಪಕ್ರಮಗಳನ್ನು ಶ್ಲಾಘಿಸಿದ ಅವರು, ಶುದ್ಧ ಇಂಧನವನ್ನು ಉತ್ತೇಜಿಸುವಂತೆ ಎಲ್ಲರಿಗೂ ಕರೆ ನೀಡಿದರು.