ಬೆಂಗಳೂರು: ಬಿಜೆಪಿ ನಾಯಕ ಆರ್. ಅಶೋಕ್ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಗುತ್ತಿಗೆದಾರರ ಬಾಕಿ ಬಿಲ್ ವಿಚಾರದಲ್ಲಿ ತೀವ್ರವಾಗಿ ಟೀಕಿಸಿದ್ದಾರೆ. ಗುತ್ತಿಗೆದಾರರು ತಮ್ಮ ಬಾಕಿ ಬಿಲ್ ಕೇಳಿದರೆ ಅಥವಾ ತಮ್ಮ ಹಕ್ಕಿಗಾಗಿ ಮುಷ್ಕರ ಮಾಡುವುದಾಗಿ ಹೇಳಿದರೆ ಅದನ್ನು “ಧಮ್ಕಿ” ಎಂದು ಕರೆಯುವುದು ಹೇಗೆ ಸರಿಯಾಗುತ್ತದೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಆರ್. ಅಶೋಕ್, “ಗುತ್ತಿಗೆದಾರರು ತಮ್ಮ ಹಕ್ಕಿಗಾಗಿ ಸರ್ಕಾರವನ್ನು ಪ್ರಶ್ನಿಸಬಹುದು, ಮುಷ್ಕರ ಮಾಡಬಹುದು, ಹೋರಾಟ ನಡೆಸಬಹುದು ಎಂಬುದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಇದೆ. ಆದರೆ, ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರ ಸಂವಿಧಾನದಲ್ಲಿ ಈ ಹಕ್ಕುಗಳಿಲ್ಲವೇ?” ಎಂದು ವ್ಯಂಗ್ಯವಾಡಿದ್ದಾರೆ.
ಗುತ್ತಿಗೆದಾರರ ಬಿಲ್‌ಗಳನ್ನು ಏಕೆ ತೀರಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಅಶೋಕ್, ರಾಜ್ಯ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿರಬಹುದು ಅಥವಾ ಗುತ್ತಿಗೆದಾರರಿಂದ ಕಾಂಗ್ರೆಸ್ ಸರ್ಕಾರ ಕೇಳುತ್ತಿರುವ ಕಮಿಷನ್‌ಗೆ ಒಪ್ಪದಿರುವುದೇ ಇದಕ್ಕೆ ಕಾರಣವಿರಬಹುದು ಎಂದು ಆರೋಪಿಸಿದ್ದಾರೆ.
“ರಸ್ತೆ ಗುಂಡಿಗಳ ದುಸ್ಥಿತಿ ಬಗ್ಗೆ ದನಿ ಎತ್ತಿದ ಉದ್ಯಮಿಗಳಿಗೆ ಧಮ್ಕಿ ಹಾಕಿ ಅವಮಾನಿಸಲಾಗಿತ್ತು. ಈಗ ಗುತ್ತಿಗೆದಾರರಿಗೂ ಧಮ್ಕಿ ಹಾಕಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಈ ಧೋರಣೆ ಮುಂದುವರಿದರೆ ಕರ್ನಾಟಕಕ್ಕೆ ಯಾವ ಉದ್ಯಮಗಳೂ ಬರುವುದಿಲ್ಲ, ಯಾವ ಗುತ್ತಿಗೆದಾರರೂ ಸರ್ಕಾರದ ಕೆಲಸ ಮಾಡುವುದಿಲ್ಲ,” ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಈ ನಡೆಯು ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.