ಗುತ್ತಿಗೆ ಅವ್ಯವಹಾರದ ತನಿಖಾ ವರದಿ; ಸರ್ಕಾರದ ನಿರ್ಧಾರ ಶೀಘ್ರದಲ್ಲೇ
ಬೆಂಗಳೂರು: ಗುತ್ತಿಗೆ ಅವ್ಯವಹಾರದ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮುಂದಿನ ಕ್ರಮ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ತೀರ್ಮಾನ ಕೈಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಲವು ಹಗರಣಗಳು ನಡೆದಿವೆ. ಪಿಎಸ್‌ಐ ನೇಮಕಾತಿ, ಉಪನ್ಯಾಸಕರ ನೇಮಕ, ಕೊರೋನಾ ಉಪಕರಣ ಖರೀದಿ ಹಗರಣ ಸೇರಿದಂತೆ ಅನೇಕ ಪ್ರಕರಣಗಳ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ಇದನ್ನು ಮಂತ್ರಿಸಂಪುಟ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ,” ಎಂದು ವಿವರಿಸಿದರು.
ನಟಿ ರನ್ಯಾ ರಾವ್ ಕೇಸ್: ಯಾರನ್ನೂ ಬಿಡುವುದಿಲ್ಲ
ನಟಿ ರನ್ಯಾ ರಾವ್ ಪ್ರಕರಣದ ವಿಚಾರಣೆ ವಾಪಸುಗೊಂಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವೆ, “ನೀವು (ಮಾಧ್ಯಮ) ಏನನ್ನು ತೋರಿಸುತ್ತಿದ್ದೀರೋ ಅಷ್ಟೇ ನಮಗೆ ಗೊತ್ತು. ಮುಖ್ಯಮಂತ್ರಿಯವರು ಮತ್ತು ಗೃಹಮಂತ್ರಿಯವರಿಗೆ ಈ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಶಾಮೀಲಾಗಿರುವವರ ವಿರುದ್ಧ ತಪ್ಪದೇ ಕ್ರಮ ಜರುಗಿಸಲಾಗುವುದು,” ಎಂದರು.
ಸಿಎಂ ಅವರಿಂದ ಉತ್ತಮ ಆಡಳಿತ
ನಾನು ಈ ಅವಧಿ ಪೂರ್ಣಗೊಳಿಸುವೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಸಿದ್ದರಾಮಯ್ಯ ನಮ್ಮ ಪಕ್ಷದ ಹಿರಿಯ ನಾಯಕರು ಹಾಗೂ ದೊಡ್ಡ ಮಾಸ್ ಲೀಡರ್. ಅವರು ಸರ್ಕಾರವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಅವರ ಮಾತುಗಳು ನಮಗೆ ಆಶೀರ್ವಾದ,” ಎಂದು ಹೇಳಿದರು.
ಮೀಸಲಾತಿ ಬೇಡಿಕೆಗೆ ಪ್ರತಿಕ್ರಿಯೆ
ಮುಸ್ಲಿಂ ಸಮುದಾಯ ಮೀಸಲಾತಿ ಹೆಚ್ಚಳಕ್ಕೆ ಮನವಿ ಸಲ್ಲಿಸಿರುವ ಕುರಿತು ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, “ನಾವು ಪಂಚಮಸಾಲಿಗಳು 2ಎ ಮೀಸಲಾತಿಗಾಗಿ ಆಗ್ರಹಿಸುತ್ತಿದ್ದೇವೆ. ಇತರ ಸಮುದಾಯಗಳು ತಮ್ಮ ಬೇಡಿಕೆ ಸಲ್ಲಿಸುವ ಹಕ್ಕನ್ನು ಹೊಂದಿದ್ದಾರೆ. ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ,” ಎಂದರು.
ಬಾಗಲಕೋಟೆ ಮಗು ಸಾವು: ತ್ವರಿತ ಕ್ರಮಕ್ಕೆ ಸೂಚನೆ
ಬಾಗಲಕೋಟೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಚಾಮರಾಜನಗರದಲ್ಲಿ ಈ ಹಿಂದೆ ಇಂತಹ ಘಟನೆ ನಡೆದಾಗ ತಕ್ಷಣ ಕ್ರಮ ಕೈಗೊಂಡಿದ್ದೇವೆ. ಬಾಗಲಕೋಟೆಯ ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.