ಮಂಡ್ಯ: ನಾನು ಭೂಮಿಪೂಜೆ ಮಾಡಿದ ಮೇಲೆ ಉಸ್ತುವಾರಿ ಸಚಿವರು ಇನ್ನೊಮ್ಮೆ ಗುದ್ದಲಿ ಪೂಜೆ ಮಾಡಿದರೆ ನಾನೇನು ಮಾಡಲಿ? ಇದರಲ್ಲಿ ನಾನು ರಾಜಕೀಯ ಮಾಡಲು ಇಚ್ಛೇಪಡುವುದಿಲ್ಲ. ಎಲ್ಲವನ್ನೂ ಜನರೇ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಕನಕೆರೆಗೆ ಶನಿವಾರ ಬಾಗೀನ ಅರ್ಪಿಸಿದ ನಂತರ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಗುದ್ದಲಿ ಪೂಜೆ ಮಾಡಬೇಕು. ಆದರೆ, ಕೇಂದ್ರ ಸರಕಾರದ ಕಾರ್ಯಕ್ರಮಕ್ಕೆ ಮತ್ತೆ ಅವರೇ ಗುದ್ದಲಿ ಪೂಜೆ ಮಾಡಿದ್ದಾರೆ! ಇದರಲ್ಲಿ ನಾನು ರಾಜಕೀಯ ಮಾಡಲ್ಲ. ನಾನು ಸಿಎಂ ಆಗಿದ್ದಾಗ ಕೊಟ್ಟ ಕಾರ್ಯಕ್ರಮಗಳು ಅನೇಕ. ಕಲ್ಲಿನ ಮೇಲೆ ಹೆಸರು ಬರೆಸಿಕೊಂಡು ಶಂಕುಸ್ಥಾಪನೆ ಮಾಡುತ್ತಾ ಹೋಗಿದ್ದಿದ್ದರೆ ರಾಜ್ಯಾದ್ಯಂತ ನನ್ನ ಹೆಸರಿನ ಕಲ್ಲುಗಳೇ ಇರುತ್ತಿದ್ದವು ಎಂದರು ಅವರು.
ನಾನು ಪ್ರಚಾರ ಪಡೆಯಬೇಕೆಂದು ಕೆಲಸ ಮಾಡಿಲ್ಲ. ಅದು ನನ್ನ ಕರ್ತವ್ಯ ಆಗಿತ್ತು. ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡುವುದು ನನ್ನ ನೀತಿ. ಕೇಂದ್ರದ ಅನುದಾನ ತರಲಿ, ನಾವು ಕುಮಾರಸ್ವಾಮಿ ಅವರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಚಲುವರಾಯಸ್ವಾಮಿ ನನಗೆ ಅಭಿನಂದಿಸೋದು ಬೇಡ. ಅವರಿಗೆ ಸಿಕ್ಕಿರುವ ಅವಕಾಶದಲ್ಲಿ ಇವರು ಏನು ಮಾಡಬೇಕೋ ಅದನ್ನು ಮಾಡಲಿ. ಮೊದಲು ಅವರು ಚಲುವರಾಯಸ್ವಾಮಿ ಕೆಲಸ ಮಾಡಲಿ. ನಾನು ಏನು ಕೆಲಸ ಮಾಡಬೇಕು ಅದನ್ನು ಮಾಡುತ್ತೇನೆ. ಪ್ರಚಾರದ ರಾಜಕೀಯಕ್ಕೆ ನಾನು ಮಹತ್ವ ಕೊಡಲ್ಲ ಎಂದು ಅವರು ಹೇಳಿದರು.
ಗೋಣಿ ಚೀಲ ಖರೀದಿ ಮಾಡುತ್ತಿದ್ದೀರಾ?:
ಮಂಡ್ಯ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯದ ವಿಚಾರದ ಬಗ್ಗೆ ಕೇಂದ್ರ ಸಚಿವರು ತೀವ್ರ ಕೆಂಡಾಮಂಡಲರಾದರು.
ಭತ್ತದ ಬೆಲೆ ₹1700ರಿಂದ 1800ಕ್ಕೆ ಬಂದಿದೆ.
ನಾನು ಕಳೆದ ವಾರವೇ ಭತ್ತ ಖರೀದಿ ಕೇಂದ್ರ ತೆರೆಯಿರಿ ಎಂದಿದ್ದೆ. ಜನರು ಬೀದಿಗೆ ಇಳಿದು ಪ್ರತಿಭಟನೆ ಮಾಡುವ ಮುಂಚೆ ಎಚ್ಚೆತ್ತುಕೊಳ್ಳಿ ಎಂದು ಜಿಲ್ಲಾಧಿಕಾರಿಗೆ ಹೇಳಿದ್ದೆ. 15ನೇ ತಾರೀಖಿನೊಳಗೆ ಮಾಡ್ತೀನಿ ಎಂದು ಹೇಳಿದ್ದರು ಅವರು. ಪಾಪ.. ಇನ್ನೂ ಗೋಣಿ ಚೀಲ ಖರೀದಿ ಮಾಡ್ತಾ ಇದಾರೆ ಎಂದು ಕಾಣುತ್ತೆ. ಭತ್ತ ತುಂಬಿಸಲು ಈ ಸರಕಾರದ ಬಳಿ ಗೋಣಿ ಚೀಲ ಕೂಡ ಇಲ್ಲ ಎಂದು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಚಲುವರಾಯಸ್ವಾಮಿ ಅವರು ನನಗೆ ಅಭಿನಂದನೆ ಸಲ್ಲಿಸುವ ಬದಲು ಭತ್ತ ಖರೀದಿ ಕೇಂದ್ರ ತೆರೆಯುವ ಕೆಲಸ ಮಾಡಲಿ ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.
ಕಾಂಗ್ರೆಸ್ ಬಣ ರಾಜಕೀಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ಕೇಂದ್ರ ಸಚಿವರು ಆಸಕ್ತಿ ತೋರಿಸಲಿಲ್ಲ. “ಅದು ಅವರ ಪಕ್ಷಕ್ಕೆ ಸೇರಿದ ವಿಚಾರ. ಡಿನ್ನರ್ ಮೀಟಿಂಗ್ ಸೇರ್ತಾರೋ, ಇನ್ಯಾವುದಕ್ಕೋ ಸೇರ್ತಾರೋ ನನಗೆ ಸೇರದ ವಿಚಾರವಲ್ಲ. ಸಚಿವ ಪರಮೇಶ್ವರ್ ಮನೆಯ ಔತಣಕೂಟಕ್ಕೆ ಸೇರುವ ವಿಚಾರಕ್ಕೆ ಕಾರಣ ನೀಡಿದ್ದಾರೆ. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಬಗ್ಗೆ ಮಾತನಾಡಲು ಸೇರುತ್ತಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ. ಡಿನ್ನರ್ ಮೀಟಿಂಗ್ ನಲ್ಲಿ ಸ್ಕಾಲರ್ ಶಿಪ್ ವಿಷಯ ಮಾತನಾಡುತ್ತಾರೆ ಎಂದಾರೆ ಕ್ಯಾಬಿನೆಟ್ ಇರೋದು ಏಕೆ? ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ ವಿಧಾನಸೌಧ ಇರುವುದು ಏತಕ್ಕೆ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನೆ ಮಾಡಿದರು.
ಇವರು ಔತಣಕೂಟ ಮಾಡಿಕೊಂಡು ಏನು ಚರ್ಚೆ ಮಾಡುತ್ತಾರೆ? ವಾಲ್ಮೀಕಿ ನಿಗಮದಲ್ಲಿ ಹೊಡೆದಿರುವ ದುಡ್ಡು ವಾಪಸ್ ಬಂದಿಲ್ಲ ಎಂದು ಚರ್ಚೆ ಮಾಡುತ್ತಾರಾ? ಭೋವಿ ನಿಗಮದ ದುಡ್ಡಿನ ಶೇರ್ ಬಂದಿಲ್ಲ ಎಂದು ಚರ್ಚೆ ಮಾಡುತ್ತಾರಾ? ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಬೇಕಾದ ವಿಚಾರವನ್ನು ಔತಣಕೂಟದಲ್ಲಿ ಏನು ಚರ್ಚೆ ಮಾಡುತ್ತಾರೆ? ಕ್ಯಾಬಿನೆಟ್, ಮುಖ್ಯಮಂತ್ರಿ ಎಲ್ಲಾ ಇರುವುದು ಏಕೆ? ಅಹಿಂದ ಮಹಾನ್ ನಾಯಕರು ಅಲ್ಲವೇ ಇವರೆಲ್ಲರೂ?
ಸ್ಕಾಲರ್ಶಿಪ್ ಬಗ್ಗೆ ಔತಣಕೂಟ ಮಾಡಿಕೊಂಡು ಮಾತಾಡಬೇಕಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಾರಾಯಣಗೌಡರ ಹೇಳಿಕೆ ಬಗ್ಗೆ ಚರ್ಚೆ ಮಾಡುತ್ತೇನೆ:
ಮಂಡ್ಯದಲ್ಲಿ ಮೈತ್ರಿಧರ್ಮ ಪಾಲನೆಯಾಗುತ್ತಿಲ್ಲ ಎಂದು ಮಾಜಿ ಸಚಿವ ನಾರಾಯಣಗೌಡ ಹೇಳಿಕೆ ವಿಚಾರದ ಬಗ್ಗೆ ಸಚಿವರು ಉತ್ತರಿಸಿದರು.
ನಾನು ಕೂಡ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಸಾರ್ವಜನಿಕವಾಗಿ ಈ ಬಗ್ಗೆ ಮಾತಾಡಿದ್ದಕ್ಕೆ ಉತ್ತರ ಕೊಡಲು ಆಗುತ್ತಾ? ನಾಲ್ಕು ಗೋಡೆ ನಡುವೆ ಮಾತನಾಡುತ್ತೇವೆ.
ಇವೆಲ್ಲ ಹೊರಗಡೆ ಚರ್ಚೆ ಮಾಡಲು ಆಗಲ್ಲ.
ನನ್ನ ಬಳಿ ಏನು ಸಮಸ್ಯೆ ಎಂದು ಹೇಳಿದರೆ ಖಂಡಿತಾ ಸರಿಪಡಿಸಬಹುದು ಎಂದರು.

ಕಾರು ಹೇಳಿಕೆ; ಚಲುವರಾಯಸ್ವಾಮಿ ಚಿಲ್ಲರೆ ರಾಜಕಾರಣ:
ಸುಮಲತಾ ಬಳಸಿದ್ದ ಕಾರು ಹತ್ತಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಸುಳ್ಳಿನ ಆರೋಪ ಮಾಡಿರುವ ಸಚಿವ ಚಲುವರಾಯಸ್ವಾಮಿ ಬಗ್ಗೆ ಕೇಂದ್ರ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಾನು ಅವರ ಕಾರು, ಇವರ ಕಾರು ಹತ್ತಲ್ಲ ಎಂದಿಲ್ಲ. ಹಾಗಂತ ಎಲ್ಲಾದರೂ ಹೇಳಿದ್ದೇನೆಯೇ? ಚಿಲ್ಲರೆ ರಾಜಕಾರಣ ಮಾಡುವುದು ಬೇಡ ಎಂದು ಚಲುವರಾಯಸ್ವಾಮಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.
ನಾನು ಸುಮಲತಾ ಅವರ ಕಾರು ಹತ್ತಲ್ಲ ಎಂಬ ಮಾತನ್ನೇ ಹೇಳಿಲ್ಲ. ಹಾಗೆಂದು ಚಲುವರಾಯಸ್ವಾಮಿ ಯಾಕೆ ಹೇಳಿದ್ದಾರೋ ಗೊತ್ತಿಲ್ಲ. ಆ ಕಾರು ತೆಗೆದುಕೊಳ್ಳಲ್ಲ ಎಂದು ನಾನು ಪತ್ರ ಬರೆದಿದ್ದೀನಾ? ಸರಕಾರಿ ಕಾರು ನಮ್ಮಪ್ಪನ ಆಸ್ತಿನಾ? ನಾನು ಸಿಎಂ ಆಗಿದ್ದಾಗ ಸರಕಾರಿ ಕಾರು, ಡ್ರೈವರ್, ಸಂಬಳ ತಗೊಂಡಿಲ್ಲ. ಈ ವಿಚಾರವನ್ನು ಚಿಲ್ಲರೆ ರೀತಿ ರಾಜಕೀಯವಾಗಿ ಬೆರಸುವ ಅವಶ್ಯಕತೆ ಇಲ್ಲ. ನನಗೆ ಒಂದು ಕಾರು ಕೊಡಿ ಎಂದು ಕೇಳಿದೇನೆಯೇ ಹೊರತು ಸುಮಲತಾ ಅವರು ಬಳಸಿರುವ ಬಳಸಲ್ಲ ಎಂದು ಎಲ್ಲಾದರೂ ಹೇಳಿದ್ದೆನೆಯೇ? ಇಂತಹ ಸಣ್ಣ ವಿಚಾರವನ್ನು ಚರ್ಚೆ ಮಾಡುವ ಸಂಸ್ಕೃತಿಯನ್ನು ಚಲುವರಾಯಸ್ವಾಮಿ ಬಿಡುವುದು ಒಳ್ಳೆಯದು ಎಂದು ಕೇಂದ್ರ ಸಚಿವರು ಹೇಳಿದರು.
ಮೆರವಣಿಗೆ, ನಂತರ ಕೆರೆಗೆ ಬಾಗೀನ:
ಚಾಕನಕೆರೆ ಬಾಗೀನ ಅರ್ಪಿಸುವ ಮುನ್ನ ಕೇಂದ್ರ ಸಚಿವರನ್ನು ಗ್ರಾಮಸ್ಥರು ಬೆಳ್ಳಿರಥದ ಮೇಲೆ ಮೆರವಣಿಗೆಯಲ್ಲಿ ಕರೆ ತಂದರು.
ಮಾಜಿ ಸಚಿವ ಡಿಸಿ ತಮ್ಮಣ್ಣ, ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮುಂತಾದವರು ಉಪಸ್ಥಿತರಿದ್ದರು.