ಗೋವಾ, ಫೊಂಡಾ (ಸಚ್ಚಿದಾನಂದ ಪರಬ್ರಹ್ಮ ಡಾ. ಅಠಾವಲೆನಗರಿ), ಮೇ 17, 2025: ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಅಠವಲೆ ಅವರ ವಂದನೀಯ ಉಪಸ್ಥಿತಿಯಲ್ಲಿ, ಸನಾತನ ಸಂಸ್ಥೆಯ ರಜತ ಮಹೋತ್ಸವ ಮತ್ತು ಅವರ 83ನೇ ಜನ್ಮೋತ್ಸವದ ನಿಮಿತ್ತ ಗೋವಾದ ಫರ್ಮಾಗುಡಿಯ ಗೋವಾ ಎಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಭವ್ಯ ಚಾಲನೆ ದೊರೆಯಿತು. ಮೇ 17ರಿಂದ 19ರವರೆಗೆ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ 23 ದೇಶಗಳಿಂದ 19,000 ಭಕ್ತರು ಹಾಗೂ ಕರ್ನಾಟಕದಿಂದ 5,000ಕ್ಕೂ ಅಧಿಕ ಹಿಂದೂ ಬಂಧುಗಳು ಆಗಮಿಸಿದ್ದರು.
ಗೋವಾ ದೇವಭೂಮಿ, ಭೋಗಭೂಮಿಯಲ್ಲ:
ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ, “ಹಿಂದೆ ಗೋವಾಕ್ಕೆ ಜನರು ಸಮುದ್ರ ಮತ್ತು ಇತರ ಆಕರ್ಷಣೆಗಳಿಗಾಗಿ ಬರುತ್ತಿದ್ದರು. ಆದರೆ, ಸನಾತನ ಸಂಸ್ಥೆಯ ಕಾರ್ಯದಿಂದಾಗಿ ಇಂದು ಭಾರತೀಯ ಸಂಸ್ಕೃತಿ ಮತ್ತು ದೇವಾಲಯಗಳನ್ನು ಅನುಭವಿಸಲು ಜನರು ಆಗಮಿಸುತ್ತಿದ್ದಾರೆ. ಗೋವಾ ಭೋಗಭೂಮಿಯಲ್ಲ, ದೇವಭೂಮಿಯಾಗಿದೆ. ಸನಾತನ ಸಂಸ್ಥೆಯ ಕಾರ್ಯಗಳು ಆರ್ಥಿಕತೆ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಹೆಚ್ಚಿಸಿವೆ,” ಎಂದು ಶ್ಲಾಘಿಸಿದರು. ಕಳೆದ 25 ವರ್ಷಗಳಿಂದ ಸನಾತನ ಸಂಸ್ಥೆ ಹಿಂದೂ ಧರ್ಮದ ಪ್ರಸಾರಕ್ಕಾಗಿ ಮಾಡಿರುವ ಕಾರ್ಯ ಹಾಗೂ ಆಧ್ಯಾತ್ಮಿಕ ಗ್ರಂಥಗಳ ರಚನೆ ಯುವಕರಿಗೆ ಪ್ರೇರಣೆಯಾಗಿದ್ದು, ಮುಂದಿನ 100 ವರ್ಷಗಳವರೆಗೆ ಮಾರ್ಗದರ್ಶನ ನೀಡುವ ದೀಪಸ್ತಂಭವಾಗಿದೆ ಎಂದರು.
ಗೋವಾ ಸರ್ಕಾರದಿಂದ ಡಾ. ಅಠಾವಲೆ ಅವರಿಗೆ ವಿಶೇಷ ಸನ್ಮಾನ:
ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅವರು ಗೋವಾ ಸರ್ಕಾರದ ವತಿಯಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠಾವಲೆ ಅವರಿಗೆ ಶಾಲು, ಶ್ರೀಫಲ ಮತ್ತು ಸ್ಮರಣಿಕೆ ನೀಡಿ ವಿಶೇಷ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಡಾ. ಅಠಾವಲೆ ಅವರ ಹಸ್ತದಿಂದ ಮುಖ್ಯಮಂತ್ರಿಗಳಿಗೆ ದೇಶದ ರಕ್ಷಣಾ ಕಾರ್ಯಕ್ಕಾಗಿ ಸಹಾಯ ನಿಧಿಯನ್ನು ಹಸ್ತಾಂತರಿಸಲಾಯಿತು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್‌ನ ಶ್ರೀ. ಚಕ್ರವರ್ತಿ ಸೂಲಿಬೆಲೆ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಪ್ರಮೋದ್ ಮುತಾಲಿಕ್, ಶಾಂಭವಿ ಪೀಠದ ಶ್ರೀ ಆನಂದ ಸ್ವರೂಪ ಮಹಾರಾಜರು, ನಿವೃತ್ತ ಐಎಎಸ್ ಅಧಿಕಾರಿ ಶ್ರೀ. ನಂದಕುಮಾರ್, ದತ್ತ ಪದ್ಮನಾಭ ಪೀಠದ ಪದ್ಮಶ್ರೀ ಸದ್ಗುರು ಬ್ರಹ್ಮೇಶಾನಂದ ಸ್ವಾಮೀಜಿ, ‘ಸನಾತನ ಬೋರ್ಡ್’ನ ಪೂ. ದೇವಕೀನಂದನ್ ಠಾಕೂರ್, ಕೇಂದ್ರ ಇಂಧನ ರಾಜ್ಯ ಸಚಿವ ಶ್ರೀ. ಶ್ರೀಪಾದ್ ನಾಯಕ್, ಗೋವಾದ ವಿದ್ಯುತ್ ಸಚಿವ ಶ್ರೀ. ಸುದಿನ್ ಧವಳೀಕರ್, ಸಮಾಜ ಕಲ್ಯಾಣ ಸಚಿವ ಶ್ರೀ. ಸುಭಾಷ್ ಫಳದೇಸಾಯಿ, ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಮತ್ತು ಶ್ರೀ. ಅಭಯ ವರ್ತಕ್ ಸೇರಿದಂತೆ ಅನೇಕ ಸಂತ ಮಹಂತರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸನಾತನ ಧರ್ಮವೇ ನಮ್ಮ ಮೂಲ:
ಮೈಸೂರು ರಾಜವಂಶದ ಯುವರಾಜ ಹಾಗೂ ಸಂಸದ ಶ್ರೀ. ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಮಾತನಾಡಿ, “ನಾವು ವಿಶ್ವದ ಅತ್ಯಂತ ಪ್ರಾಚೀನ ಸಂಪ್ರದಾಯದ ರಕ್ಷಕರು. ನಮ್ಮ ಮೂಲ ನಾಗರಿಕತೆ ಸನಾತನ ಧರ್ಮದಲ್ಲಿ ಅಡಗಿದೆ. ಸನಾತನ ರಾಷ್ಟ್ರವು ರಾಜಕೀಯ ಆಡಳಿತವಲ್ಲ, ಆಧ್ಯಾತ್ಮಿಕ ಸೇವಾಭಾವದಿಂದ ಕೂಡಿದ ವ್ಯವಸ್ಥೆಯಾಗಿದೆ,” ಎಂದರು.
ಗೋವಾ ಪರಶುರಾಮನ ಭೂಮಿ:
ಪೂ. ದೇವಕೀನಂದನ್ ಠಾಕೂರ್ ಮಾತನಾಡಿ, “ಗೋವಾ ಸಮುದ್ರತೀರದಲ್ಲಿ ಕುಳಿತುಕೊಳ್ಳುವ ಭೂಮಿಯಲ್ಲ, ಬದಲಿಗೆ ಭಗವಾನ್ ಪರಶುರಾಮನ ಉಪಾಸನೆಯ ಭೂಮಿಯಾಗಿದೆ. ಭಾರತದಲ್ಲಿ ದೇವಾಲಯಗಳು, ಗೋಶಾಲೆಗಳು ಮತ್ತು ವೇದವಿದ್ಯಾಲಯಗಳು ನಿರ್ಮಾಣವಾಗುತ್ತಿವೆ. ಭಾರತ ಭವಿಷ್ಯದಲ್ಲೂ ಹಿಂದೂ ರಾಷ್ಟ್ರವಾಗಿರುತ್ತದೆ,” ಎಂದು ಘೋಷಿಸಿದರು.
ಕಾರ್ಯಕ್ರಮದ ವಿಶೇಷತೆಗಳು:
- ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠಾವಲೆಜೀ ಕಾ ಸಂಕ್ಷಿಪ್ತ ಚರಿತ್ರ’ ಎಂಬ ಹಿಂದಿ ಗ್ರಂಥ ಮತ್ತು ಇ-ಬುಕ್‌ನ ಲೋಕಾರ್ಪಣ.
- ಮಹೋತ್ಸವ ಸ್ಥಳದ ಮುಖ್ಯ ಪ್ರವೇಶದ್ವಾರಕ್ಕೆ ‘ಭಗವಾನ್ ಪರಶುರಾಮ ಸುವರ್ಣದ್ವಾರ’, ಏಳು ಮಾರ್ಗಗಳಿಗೆ ‘ಸಪ್ತರ್ಷಿಗಳ’ ಹೆಸರು, ಮೂರು ಸಭಾಮಂಟಪಗಳಿಗೆ ‘ಶ್ರೀನಿವಾಸ ಮಂಟಪಂ’, ‘ಶ್ರೀದೇವಿ ಮಂಟಪಂ’ ಮತ್ತು ‘ಭೂದೇವಿ ಮಂಟಪಂ’ ಎಂದು ನಾಮಕರಣ.
- ಶ್ರೀರಾಮ, ಛತ್ರಪತಿ ಶಿವಾಜಿ ಮಹಾರಾಜ ಮತ್ತು ಗೋವರ್ಧನ ಪರ್ವತವನ್ನು ಎತ್ತಿರುವ ಶ್ರೀಕೃಷ್ಣನ ಪ್ರತಿಮೆಗಳು ಹಾಗೂ ಅಫ್ಜಲ್ಖಾನ್ ವಧೆಯ ಕಟೌಟ್‌ಗಳ ಸ್ಥಾಪನೆ.
- ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯಿಂದ 1,000 ವರ್ಷಗಳ ಹಿಂದಿನ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ದರ್ಶನ.
- ಧರ್ಮ ಸಂಸ್ಥಾಪನೆಗಾಗಿ 1 ಕೋಟಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ನಾಮಜಪಕ್ಕೆ ಚಾಲನೆ.
ಹೆಚ್ಚಿನ ಮಾಹಿತಿಗೆ:
ಕಾರ್ಯಕ್ರಮದ ವಿವರಗಳಿಗಾಗಿ SanatanRashtraShankhnad.in ವೆಬ್‌ಸೈಟ್‌ಗೆ ಭೇಟಿ ನೀಡಿ.