ಬೆಂಗಳೂರು: 2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಗ್ರೇಡ್-1, ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಕೈಗೊಳ್ಳುವ ನವೀನ ಪ್ರಕ್ರಿಯೆಯನ್ನು ಜುಲೈ 22 ರಂದು ಆರಂಭಿಸಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಿದ ನೌಕರರು ಆನ್‌ಲೈನ್ ವೇದಿಕೆಯ ಮೂಲಕ ತಮ್ಮ ಆದ್ಯತೆಯ ಸ್ಥಳಗಳನ್ನು ಆಯ್ಕೆ ಮಾಡಬಹುದಾಗಿದೆ. ಕನಿಷ್ಠ ಮೂರು ವರ್ಷಗಳ ಸೇವೆ ಸಲ್ಲಿಸಿದ ನೌಕರರು ವರ್ಗಾವಣೆಗೆ ಅರ್ಹರಾಗಿದ್ದು, ವಿಶೇಷ ಚೇತನರು ಹಾಗೂ ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನಿಯಮಗಳಲ್ಲಿ ವಿನಾಯಿತಿ ನೀಡಲಾಗಿದೆ. ರಾಜ್ಯದ 31 ಜಿಲ್ಲೆಗಳಿಂದ ಒಟ್ಟು 2,697 ನೌಕರರು ವರ್ಗಾವಣೆಗಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಸಚಿವ ಖರ್ಗೆ ಮಾಹಿತಿ ನೀಡಿದ್ದಾರೆ.
ನೌಕರರ ಅರ್ಜಿಗಳು ಮತ್ತು ಆಯ್ಕೆಯ ಸ್ಥಳಗಳನ್ನು ಪರಿಗಣಿಸಿ, ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ವಿಶೇಷ ಪ್ರಕರಣಗಳ ಕೌನ್ಸೆಲಿಂಗ್ ಜುಲೈ 24 ರಂದು, ಎರಡನೇ ಹಂತದಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಮತ್ತು ಕಡ್ಡಾಯ ವರ್ಗಾವಣೆ ಪ್ರಕರಣಗಳ ಕೌನ್ಸೆಲಿಂಗ್ ಜುಲೈ 25 ರಂದು, ಮತ್ತು ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್ ಜುಲೈ 28 ರಂದು ನಡೆಯಲಿದೆ ಎಂದು ಸಚಿವರು ವಿವರಿಸಿದ್ದಾರೆ.
ಈ ಆನ್‌ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆಯು ಕನಿಷ್ಠ ಸೇವಾವಧಿ ಪೂರೈಸಿದ ನೌಕರರಿಗೆ ಪಾರದರ್ಶಕ ವರ್ಗಾವಣೆ ಅವಕಾಶ ಕಲ್ಪಿಸುವ ಜೊತೆಗೆ ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸಲಿದೆ ಎಂದು ಸಚಿವ ಖರ್ಗೆ ಹೇಳಿದ್ದಾರೆ. ಅಂತರಜಿಲ್ಲೆ ವರ್ಗಾವಣೆಗೆ ಅರ್ಹರಿರುವ ನೌಕರರ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳ ಆಯ್ಕೆಯ ಜಿಲ್ಲೆಗಳಿಗೆ ವರ್ಗಾವಣೆ ಆದೇಶ ನೀಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಈ ನವೀನ ಕ್ರಮವು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಉನ್ನತೀಕರಿಸಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.