ಬೆಂಗಳೂರು: ಗ್ರಾಹಕರ ದೂರು ನಿರ್ವಹಣೆಯನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ಇತ್ಯರ್ಥಗೊಳಿಸಲು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ) ಡಿಜಿಟಲ್ ಪೋರ್ಟಲ್ ಪರಿಚಯಿಸಲು ಮುಂದಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ತಿಳಿಸಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮತ್ತು ಬೆಸ್ಕಾಂ ಸಹಯೋಗದೊಂದಿಗೆ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆಯ (ಸಿಜಿಆರ್‌ಎಫ್) ಅಧಿಕಾರಿಗಳಿಗಾಗಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
“ಗ್ರಾಹಕರ ಹಕ್ಕುಗಳಿಗೆ ಒತ್ತು ನೀಡಿ, ದೂರು ನಿರ್ವಹಣೆಯನ್ನು ಪಾರದರ್ಶಕಗೊಳಿಸಲು ಡಿಜಿಟಲ್ ಪೋರ್ಟಲ್ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ಕಾರ್ಪೋರೇಟ್ ವ್ಯವಹಾರಗಳ ಮುಖ್ಯ ಪ್ರಧಾನ ವ್ಯವಸ್ಥಾಪಕರನ್ನು ನಿಯೋಜಿಸಲಾಗಿದೆ,” ಎಂದು ಡಾ. ಶಿವಶಂಕರ ಹೇಳಿದರು. “ಕೆಇಆರ್‌ಸಿ ಆದೇಶದಂತೆ ಸ್ಥಾಪಿತವಾದ ಸಿಜಿಆರ್‌ಎಫ್ ಮೂಲಕ ಗ್ರಾಹಕರ ದೂರುಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಬೇಕು. ಜಿಲ್ಲಾ ಮಟ್ಟದ ವೇದಿಕೆಯಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸ್ವತಂತ್ರ ಸದಸ್ಯರು ಭಾಗವಹಿಸುತ್ತಾರೆ. ಕಾರ್ಪೋರೇಟ್ ಕಚೇರಿಯಲ್ಲಿ ದೂರು ಇತ್ಯರ್ಥವಾಗದಿದ್ದರೆ, ಕೆಇಆರ್‌ಸಿ ವಿದ್ಯುಚ್ಛಕ್ತಿ ಲೋಕಪಾಲರ ಬಳಿ ಗ್ರಾಹಕರು ಪರಿಹಾರ ಕೋರಬಹುದು,” ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಕೆಇಆರ್‌ಸಿ ಅಧ್ಯಕ್ಷ ಹಾಗೂ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, “ಗ್ರಾಹಕರ ದೂರುಗಳ ಇತ್ಯರ್ಥದಲ್ಲಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಮತ್ತು ತ್ವರಿತವಾಗಿ ನ್ಯಾಯ ಒದಗಿಸಬೇಕು. ಇದರಿಂದ ಸೇವೆಯ ಗುಣಮಟ್ಟ ಹೆಚ್ಚಲಿದೆ,” ಎಂದರು.
ಕೆಇಆರ್‌ಸಿ ಸದಸ್ಯ (ಕಾನೂನು) ಎಚ್.ಕೆ. ಜಗದೀಶ್, “ವಿದ್ಯುಚ್ಛಕ್ತಿ ಅಧಿನಿಯಮ 2003ರ ಸೆಕ್ಷನ್ 42ರಲ್ಲಿ ಗ್ರಾಹಕರ ದೂರುಗಳಿಗೆ ನ್ಯಾಯ ಒದಗಿಸುವ ಕುರಿತು ವಿವರಿಸಲಾಗಿದೆ. ಸಿಜಿಆರ್‌ಎಫ್ ಮತ್ತು ವಿದ್ಯುಚ್ಛಕ್ತಿ ಲೋಕಪಾಲರನ್ನು ಅರೆನ್ಯಾಯಿಕ ವೇದಿಕೆಯಾಗಿ ಪರಿಗಣಿಸಲಾಗಿದ್ದು, ಇದರ ಕಾರ್ಯವ್ಯಾಪ್ತಿಯನ್ನು ಸರ್ವೋಚ್ಛ ಮತ್ತು ಉಚ್ಛ ನ್ಯಾಯಾಲಯಗಳು ಸ್ಪಷ್ಟಪಡಿಸಿವೆ,” ಎಂದರು.
ಕಾರ್ಯಾಗಾರದಲ್ಲಿ ಕೆಇಆರ್‌ಸಿ ತಾಂತ್ರಿಕ ನಿರ್ದೇಶಕ ಶ್ರೀನಿವಾಸಪ್ಪ, ನಿವೃತ್ತ ನ್ಯಾಯಾಧೀಶರಾದ ಕೃಷ್ಣಯ್ಯ ಮತ್ತು ಐ.ಎಫ್. ಬಿದರಿ ಅವರು ಗ್ರಾಹಕರ ಹಕ್ಕುಗಳು, ತಾಂತ್ರಿಕ ವಿಷಯಗಳು ಮತ್ತು ಸಾಮಾನ್ಯ ದೂರುಗಳ ಕುರಿತು ವಿವರಿಸಿದರು. ಕಾರ್ಯಾಗಾರದಲ್ಲಿ ಕೆಇಆರ್‌ಸಿ ಕಾರ್ಯದರ್ಶಿ ಸಿದ್ದೇಶ್ವರ್, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಎಚ್.ಜೆ. ರಮೇಶ್, ಹಣಕಾಸು ನಿರ್ದೇಶಕ ಮಹಾದೇವ, ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಡಾ. ದಯಾನಂದ್, ಗ್ರಾಹಕ ಸಂಬಂಧ ಶಾಖೆಯ ಪ್ರಧಾನ ವ್ಯವಸ್ಥಾಪಕ ರಾಜೋಜಿ ರಾವ್ ಮತ್ತು ಕಾರ್ಪೋರೇಟ್ ವ್ಯವಹಾರಗಳ ಮುಖ್ಯ ಪ್ರಧಾನ ವ್ಯವಸ್ಥಾಪಕ ಪುಷ್ಪ ಎಸ್.ಎ ಉಪಸ್ಥಿತರಿದ್ದರು.