ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಗುರುವಾರ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಪಡೆದಿದೆ. ವಿಧಾನಸಭೆಯಲ್ಲಿ ಈಗಾಗಲೇ ಅಂಗೀಕೃತವಾಗಿರುವ ಈ ವಿಧೇಯಕವನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೇಲ್ಮನೆಯಲ್ಲಿ ಮಂಡಿಸಿದರು. ಅಲ್ಪಚರ್ಚೆಯ ಬಳಿಕ ವಿಧೇಯಕಕ್ಕೆ ಸದನದ ಅನುಮೋದನೆ ದೊರೆಯಿತು.
ವಿಧೇಯಕ ಮಂಡನೆ ವೇಳೆ ಮಾತನಾಡಿದ ಶಿವಕುಮಾರ್, “ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಸಂವಿಧಾನದ 74ನೇ ತಿದ್ದುಪಡಿಯಡಿ ಬರುವ ಪಾಲಿಕೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದನ್ನು ಈ ವಿಧೇಯಕದಲ್ಲಿ ಸ್ಪಷ್ಟಪಡಿಸಲಾಗಿದೆ. ಭವಿಷ್ಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿರದಂತೆ, ಜಿಬಿಎ ಪಾಲಿಕೆಗಳ ಕಾರ್ಯಕ್ಷೇತ್ರಕ್ಕೆ ಒಳಗೊಳ್ಳದಿರುವುದನ್ನು ಈ ತಿದ್ದುಪಡಿಯ ಮೂಲಕ ಖಚಿತಪಡಿಸಲಾಗಿದೆ,” ಎಂದು ಹೇಳಿದರು.
ಸದಸ್ಯರಾದ ಗೋವಿಂದರಾಜು, ಟಿ.ಎ. ಶರವಣ ಮತ್ತು ಎಚ್.ಎಸ್. ಗೋಪಿನಾಥ್ ಅವರು ಕೇಳಿದ ಸ್ಪಷ್ಟನೆಗಳಿಗೆ ಉತ್ತರಿಸಿದ ಸಚಿವರು, “ರಾಜ್ಯ ಸರ್ಕಾರ ಮತ್ತು ಪಾಲಿಕೆಗಳು ವಿಭಿನ್ನ ಪಕ್ಷಗಳ ಅಧೀನದಲ್ಲಿರುವ ಸಂದರ್ಭಗಳು ಈ ಹಿಂದೆ ಕಂಡುಬಂದಿವೆ. ಇಂತಹ ಸನ್ನಿವೇಶಗಳಲ್ಲಿ ಸಂವಿಧಾನದ 74ನೇ ತಿದ್ದುಪಡಿಗೆ ಧಕ್ಕೆಯಾಗದಂತೆ ಮತ್ತು ರಾಜ್ಯ ಸರ್ಕಾರವು ಪಾಲಿಕೆಗಳ ಮೇಲೆ ನಿಯಂತ್ರಣ ಸಾಧಿಸದಂತೆ ಎಚ್ಚರಿಕೆ ವಹಿಸಲು ಈ ತಿದ್ದುಪಡಿ ವಿಧೇಯಕವನ್ನು ತರಲಾಗಿದೆ,” ಎಂದು ವಿವರಿಸಿದರು.
ಕೆಲವು ಶಾಸಕರು ಜನಸಂಖ್ಯೆ ಮತ್ತು ವಾರ್ಡ್ ರಚನೆಯ ಬಗ್ಗೆ ಉಲ್ಲೇಖಿಸಿದ್ದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, “ಪ್ರಸ್ತುತ, 2011ರ ಜನಗಣತಿಯ ಆಧಾರದಲ್ಲಿ ವಾರ್ಡ್‌ಗಳನ್ನು ರಚಿಸಲಾಗಿದೆ. ಆಗ ಒಂದು ವಾರ್ಡ್‌ನಲ್ಲಿ ಸರಾಸರಿ 18,000 ಜನಸಂಖ್ಯೆ ಇದ್ದರೆ, ಈಗ ಅದು 30,000ಕ್ಕೂ ಹೆಚ್ಚಾಗಿದೆ. ಭವಿಷ್ಯದಲ್ಲಿ ಹೊಸ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವಾಗ ಎಲ್ಲಾ ಶಾಸಕರ ಅಭಿಪ್ರಾಯವನ್ನು ಪಡೆಯಲಾಗುವುದು. ಈ ವಿಷಯವನ್ನು ಚರ್ಚೆಗೆ ಪ್ರತ್ಯೇಕವಾಗಿ ಮಂಡಿಸಿದರೆ, ಎಲ್ಲಾ ಅನುಮಾನಗಳಿಗೆ ಸವಿವರವಾಗಿ ಉತ್ತರ ನೀಡುತ್ತೇನೆ. ಈಗ ಈ ವಿಧೇಯಕವನ್ನು ಅಂಗೀಕರಿಸಿ,” ಎಂದು ಕೋರಿದರು.
ವಿಧಾನ ಪರಿಷತ್ತಿನ ಅಂಗೀಕಾರದೊಂದಿಗೆ, ಗ್ರೇಟರ್ ಬೆಂಗಳೂರು ಆಡಳಿತದಲ್ಲಿ ಸ್ಪಷ್ಟತೆ ಮತ್ತು ಸಮನ್ವಯತೆಯನ್ನು ತರುವ ಈ ತಿದ್ದುಪಡಿ ವಿಧೇಯಕವು ಜಾರಿಗೆ ಒಂದು ಹೆಜ್ಜೆ ಮುಂದಿಟ್ಟಿದೆ.