ಬೆಂಗಳೂರು:
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024 ರ ಅನ್ವಯ,Greater Bengaluru Authority (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ರಚನೆ ಕುರಿತಂತೆ ಸಾರ್ವಜನಿಕರಿಂದ ಹಾಗೂ ಸಂಘ-ಸಂಸ್ಥೆಗಳಿಂದ ಸಲಹೆಗಳನ್ನು ಸ್ವೀಕರಿಸಲು ಬೆಂಗಳೂರು ನಗರದಲ್ಲಿ ಮೂರು ದಿನಗಳ ಕಾಲ ಐದು ವಿವಿಧ ಸ್ಥಳಗಳಲ್ಲಿ ಸಭೆಗಳನ್ನು ಆಯೋಜಿಸಲಾಗಿದೆ.
ಕರ್ನಾಟಕ ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿ ಈ ವಿಧೇಯಕವನ್ನು ಪರಿಶೀಲನೆ ನಡೆಸಲಿದ್ದು, ಶಿವಾಜಿನಗರ ಕ್ಷೇತ್ರದ ಶಾಸಕರಾದ ಶ್ರೀ ರಿಜ್ವಾನ್ ಹರ್ಷದ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಹೊಸ ಆಡಳಿತ ಚೌಕಟ್ಟು ಬೆಂಗಳೂರು ಮಹಾನಗರದ ಅಭಿವೃದ್ಧಿ, ಸಮನ್ವಯ ಹಾಗೂ ಪರಿಣಾಮಕಾರಿಯಾದ ಆಡಳಿತಕ್ಕೆ ಪ್ರೇರಣೆಯಾಗಲಿದೆ. ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಜೊತೆಗೆ, ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ದಕ್ಷ ಹಾಗೂ ಸ್ಪಂದನಶೀಲಗೊಳಿಸುವ ಉದ್ದೇಶ ಈ ವಿಧೇಯಕಕ್ಕೆ ಇದೆ.
ವಲಯವಾರು ಸಭೆಗಳ ವೇಳಾಪಟ್ಟಿ
ಪಾಲಿಕೆಯ ಎಂಟು ವಲಯಗಳಿಗೆ ಸಂಬಂಧಿಸಿದಂತೆ, ಜನತೆ ತಮ್ಮ ಸಲಹೆ-ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾದ ಸಭೆಗಳು ಈ ಕೆಳಕಂಡ ಸ್ಥಳಗಳಲ್ಲಿ ಹಾಗೂ ವೇಳೆಗಳಂತೆ ನಡೆಯಲಿವೆ:
1. ಪೂರ್ವ ವಲಯ
- ದಿನಾಂಕ: 10 ಫೆಬ್ರವರಿ 2025
- ಸ್ಥಳ: ಬಂಜಾರ ಭವನ, ವಸಂತನಗರ, ತಿಮ್ಮಯ್ಯ ರಸ್ತೆ
- ಸಮಯ: ಬೆಳಿಗ್ಗೆ 11.00 ರಿಂದ 01.00 ಗಂಟೆವರೆಗೆ
2. ಮಹದೇವಪುರ ವಲಯ
- ದಿನಾಂಕ: 10 ಫೆಬ್ರವರಿ 2025
- ಸ್ಥಳ: ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೆ.ಆರ್. ಪುರ, ಟಿಸಿ ಪಾಳ್ಯ
- ಸಮಯ: ಮಧ್ಯಾಹ್ನ 03.00 ರಿಂದ ಸಂಜೆ 05.00 ಗಂಟೆವರೆಗೆ
3. ದಕ್ಷಿಣ ಹಾಗೂ ಬೊಮ್ಮನಹಳ್ಳಿ ವಲಯ
- ದಿನಾಂಕ: 11 ಫೆಬ್ರವರಿ 2025
- ಸ್ಥಳ: ಆರ್.ವಿ ಡೆಂಟಲ್ ಕಾಲೇಜು, ಜೆ.ಪಿ.ನಗರ 1ನೇ ಹಂತ
- ಸಮಯ: ಬೆಳಿಗ್ಗೆ 11.00 ರಿಂದ 01.00 ಗಂಟೆವರೆಗೆ
4. ರಾಜರಾಜೇಶ್ವರಿ ನಗರ ಹಾಗೂ ಪಶ್ಚಿಮ ವಲಯ
- ದಿನಾಂಕ: 11 ಫೆಬ್ರವರಿ 2025
- ಸ್ಥಳ: ಡಾ. ಹೆಚ್. ನರಸಿಂಹತ್ತ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಕ್ಯಾಂಪಸ್
- ಸಮಯ: ಮಧ್ಯಾಹ್ನ 03.00 ರಿಂದ ಸಂಜೆ 05.00 ಗಂಟೆವರೆಗೆ
5. ಯಲಹಂಕ ಹಾಗೂ ದಾಸರಹಳ್ಳಿ ವಲಯ
- ದಿನಾಂಕ: 12 ಫೆಬ್ರವರಿ 2025
- ಸ್ಥಳ: ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ, ಯಲಹಂಕ ನ್ಯೂಟೌನ್
- ಸಮಯ: ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 01.00 ಗಂಟೆವರೆಗೆ
ಸಾರ್ವಜನಿಕರಿಗೆ ಆಹ್ವಾನ
ನಿಯೋಜಿತ ಸಭೆಗಳಲ್ಲಿ ಸ್ಥಳೀಯ ನಾಗರಿಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಹಾಗೂ ವಿವಿಧ ಸಂಘ-ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಅನಿಸಿಕೆ, ಅಭಿಪ್ರಾಯ ಮತ್ತು ಸಲಹೆಗಳನ್ನು ಸಲ್ಲಿಸಲು ಜಂಟಿ ಪರಿಶೀಲನಾ ಸಮಿತಿ ಕೋರಿದೆ. ಈ ಸಭೆಗಳು ಬೆಂಗಳೂರಿನ ಭವಿಷ್ಯದ ಆಡಳಿತ ವ್ಯವಸ್ಥೆಗೆ ಮಹತ್ವದ ಮಾರ್ಗದರ್ಶಿಯಾಗಲಿವೆ.