ಮೈಸೂರು: ಗ್ರೇಟರ್ ಬೆಂಗಳೂರು ಚುನಾವಣೆಯನ್ನು ಮುಂದಿನ ನಾಲ್ಕು ತಿಂಗಳಲ್ಲಿ ನಡೆಸಲು ಸಿದ್ಧತೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಮೊದಲು ಮೀಸಲಾತಿ ಮತ್ತು ವಲಯವಾರು ವಿಭಾಗಗಳನ್ನು ರಚಿಸಲಾಗುವುದು. ಚುನಾವಣೆಯನ್ನು ವಿಳಂಬ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದರು.
ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ದೊರೆತಿರುವ ಹಿನ್ನೆಲೆಯಲ್ಲಿ ಚುನಾವಣೆ ಯಾವಾಗ ನಡೆಯಲಿದೆ ಎಂದು ಕೇಳಿದಾಗ, ಶಿವಕುಮಾರ್, “ಸರ್ವಪಕ್ಷ ಸಭೆ ನಡೆಸಿ, ವಿಭಾಗಗಳ ರಚನೆಯ ಬಗ್ಗೆ ಸಲಹೆ ಪಡೆಯಲಾಗುವುದು. ಸದನದಲ್ಲಿ ಎಲ್ಲರೂ ತಮ್ಮ ಸಲಹೆಗಳನ್ನು ನೀಡಿದ್ದಾರೆ. ಕ್ಯಾಬಿನೆಟ್ ಉಪಸಮಿತಿಯ ಶೇ. 90ರಷ್ಟು ಅಭಿಪ್ರಾಯಗಳನ್ನು ಪರಿಗಣಿಸಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸಲಾಗುವುದು. ಹೊಸ ಪ್ರದೇಶಗಳ ಸೇರ್ಪಡೆಗೆ ವಿಳಂಬವಾಗಬಹುದು, ಆದ್ದರಿಂದ ಈಗಿರುವ ರೀತಿಯಲ್ಲೇ ಮುಂದುವರೆಯಲಾಗುವುದು” ಎಂದು ಸ್ಪಷ್ಟಪಡಿಸಿದರು.
ವಿಪಕ್ಷದ ಟೀಕೆಗೆ ತಿರುಗೇಟು
ವಿಪಕ್ಷ ನಾಯಕ ಆರ್. ಅಶೋಕ್ ಅವರು ಗ್ರೇಟರ್ ಬೆಂಗಳೂರು ವಿಧೇಯಕವನ್ನು ‘ಕ್ವಾರ್ಟರ್ ಬೆಂಗಳೂರು’ ಎಂದು ಲೇವಡಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ವಿಧೇಯಕ ಚರ್ಚೆಗೆ ಬಂದಾಗಲೇ ವಿರೋಧ ವ್ಯಕ್ತಪಡಿಸಬೇಕಿತ್ತು. ಸದನದಲ್ಲಿ ಜಾರಿಗೆ ಒಪ್ಪಿಗೆ ನೀಡಿದ್ದೇಕೆ? ಕ್ವಾರ್ಟರ್ ಬೆಂಗಳೂರು, ಫುಲ್ ಬೆಂಗಳೂರು ಎಂದು ಏನೇ ಹೇಳಲಿ, ಸದನದಲ್ಲಿ ಸಲಹೆ ಏಕೆ ನೀಡಿದರು? ವಿರೋಧ ಪಕ್ಷದವರು ಮಾತನಾಡದಿದ್ದರೆ ಗೌರವ ಕಡಿಮೆಯೇ? ಬೆಂಗಳೂರಿನ ಒಂದು ಭಾಗಕ್ಕೆ ಅವರಿಗೆ ಗೌರವ ಸಿಗುವಂತೆ ನಾವು ನೋಡಿಕೊಳ್ಳುತ್ತೇವೆ” ಎಂದು ತಿರುಗೇಟು ನೀಡಿದರು.
ರಾಮನಗರ ಹೆಸರು ಬದಲಾವಣೆಗೆ ಶೀಘ್ರ ಘೋಷಣೆ
ರಾಮನಗರದ ಹೆಸರು ಬದಲಾವಣೆಯಲ್ಲಿ ವಿಳಂಬವಾಗುತ್ತಿದೆ ಎಂಬ ಪ್ರಶ್ನೆಗೆ, “ತಡವಾಗುತ್ತಿದೆ ಎಂದು ಯಾರು ಹೇಳಿದರು? ಒಳ್ಳೆಯ ಶುಭ ಮುಹೂರ್ತದಲ್ಲಿ ಕಾನೂನಿನ ಅಡಿಯಲ್ಲಿ ಘೋಷಣೆ ಮಾಡಲಾಗುವುದು. ಶೀಘ್ರದಲ್ಲೇ ಸಮಯ ತಿಳಿಸುತ್ತೇನೆ” ಎಂದು ಭರವಸೆ ನೀಡಿದರು.
ಪೆಹಲ್ಗಾಮ್ ದಾಳಿ: ರಾಜಕೀಯಕ್ಕೆ ಬಳಸಿಕೊಳ್ಳಬಾರದು
ಪೆಹಲ್ಗಾಮ್ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂಬ ಕಾಂಗ್ರೆಸ್‌ನ ತೀರ್ಮಾನದ ಬಗ್ಗೆ ಕೇಳಿದಾಗ, “ಪಕ್ಷ, ವ್ಯಕ್ತಿಗಿಂತ ದೇಶ ದೊಡ್ಡದು. ಪ್ರಧಾನಿಗಳಿಗೆ ಯಾವ ತೀರ್ಮಾನವಾದರೂ ಬೆಂಬಲ ನೀಡುವುದಾಗಿ, ಯಾವ ರಾಷ್ಟ್ರಕ್ಕೂ ಮಣಿಯಬಾರದು ಎಂದು ಹೇಳಿದ್ದೇವೆ. ನಮ್ಮ ಸಂಸದರು ಸಹಿ ಮಾಡಿ ಪ್ರಧಾನಿಗೆ ಪತ್ರ ನೀಡುತ್ತಿದ್ದಾರೆ. ಬೇರೆ ದೇಶದವರು ನಮ್ಮ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚಿಸಬೇಕು ಎಂಬುದು ನಮ್ಮ ಹಕ್ಕು” ಎಂದು ಒತ್ತಿ ಹೇಳಿದರು.
ಕಬಿನಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್‌ಗಳ ವಿರುದ್ಧ ಕ್ರಮ
ಕಬಿನಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್‌ಗಳ ಬಗ್ಗೆ ಪ್ರಶ್ನೆಗೆ, “ಈ ಬಗ್ಗೆ ಪಟ್ಟಿ ನೀಡಿ, ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು” ಎಂದರು.
63ನೇ ಹುಟ್ಟುಹಬ್ಬದ ಸರಳ ಆಚರಣೆ
ತಮ್ಮ 63ನೇ ಹುಟ್ಟುಹಬ್ಬದ ಬಗ್ಗೆ ಮಾತನಾಡಿದ ಶಿವಕುಮಾರ್, “ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಕುಟುಂಬದವರೊಂದಿಗೆ ರಾಜ್ಯದ ಅರಣ್ಯ ಸಂಪತ್ತನ್ನು ವೀಕ್ಷಿಸಿದ್ದೇನೆ. ಎಲ್ಲರ ಆಶೀರ್ವಾದವಿರಲಿ” ಎಂದು ತಿಳಿಸಿದರು.