ಬೆಂಗಳೂರು: ಚಿತ್ತಾಪುರದಲ್ಲಿ ಆರೆಸ್ಸೆಸ್‌ನ ಪಥಸಂಚಲನಕ್ಕೆ ಮತ್ತು ಬಂಟಿಂಗ್, ಬ್ಯಾನರ್‌ಗಳನ್ನು ಹಾಕಲು ಅನುಮತಿ ನಿರಾಕರಿಸಿದ್ದು, ಸ್ಥಳೀಯ ಆಡಳಿತದ ದುಂಡಾವರ್ತಿ ಕ್ರಮ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಯವರ ದುರ್ನಡತೆಯಿಂದಾಗಿ ಎಂದು ವಿಧಾನಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ತಮ್ಮ ಅಸಮಾಧಾನವನ್ನು ತೋಡಿಕೊಂಡರು.
ಚಿತ್ತಾಪುರದಲ್ಲಿ ಆರೆಸ್ಸೆಸ್‌ಗೆ ಪಥಸಂಚಲನಕ್ಕೆ ಅನುಮತಿ ನೀಡದಿರುವುದು ಮತ್ತು ಸುಮಾರು 6 ಸಾವಿರ ರೂಪಾಯಿಗಳನ್ನು ಶುಲ್ಕವಾಗಿ ಪಡೆದ ಬಳಿಕ ಬ್ಯಾನರ್, ಬಂಟಿಂಗ್‌ಗಳನ್ನು ತೆರವುಗೊಳಿಸಿದ್ದು ಸರಿಯಲ್ಲ ಎಂದು ಛಲವಾದಿ ಆಕ್ಷೇಪಿಸಿದರು. “ಆರೆಸ್ಸೆಸ್ ಒಂದು ರಾಜಕೀಯ ಪಕ್ಷವಲ್ಲ, ಇದು ಸಾಮಾಜಿಕ ಸಂಘಟನೆಯಾಗಿದ್ದು, ಯಾರು ಬೇಕಾದರೂ ಇದರಲ್ಲಿ ಭಾಗವಹಿಸಬಹುದು. ಕೇಂದ್ರ ಸರಕಾರದ ಆದೇಶವೂ ಇದಕ್ಕೆ ಸಂಬಂಧಿಸಿದೆ,” ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ಗೆ ಟೀಕೆ: ಪ್ರಿಯಾಂಕ್ ಖರ್ಗೆ ಮತ್ತು ಬಿ.ಕೆ. ಹರಿಪ್ರಸಾದ್ ಅವರನ್ನು ಗುರಿಯಾಗಿಟ್ಟುಕೊಂಡ ಛಲವಾದಿ, ಕಾಂಗ್ರೆಸ್‌ನ ಎಐಸಿಸಿಯಲ್ಲಿ ಅಲೆಮಾರಿ ಸಮುದಾಯಗಳ ಘಟಕಕ್ಕೆ ಡಾ. ಎ.ಎಸ್. ಪ್ರಭಾಕರ್‌ರನ್ನು ರಾಷ್ಟ್ರೀಯ ಸಂಚಾಲಕರನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿದರು. “ಹಂಪಿ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿರುವ ಇವರನ್ನು ಎಐಸಿಸಿಯಲ್ಲಿ ನೇಮಿಸಿರುವುದು ಕಾನೂನುಬಾಹಿರವೇ? ಸಾಮಾಜಿಕ ಸಂಘಟನೆಯಲ್ಲಿ ಭಾಗಿಯಾಗುವುದು ತಪ್ಪೇ?” ಎಂದು ಕೇಳಿದ ಅವರು, ಈ ಬಗ್ಗೆ ಎಐಸಿಸಿಯ ಅಧ್ಯಕ್ಷರು ಉತ್ತರ ನೀಡಬೇಕೆಂದು ಒತ್ತಾಯಿಸಿದರು.
ಅನಾಹುತಗಳ ಮರೆಮಾಚುವಿಕೆಗೆ ಆರೆಸ್ಸೆಸ್ ವಿಷಯ ಪ್ರಸ್ತಾಪ: ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಗುತ್ತಿರುವ ಅನಾಹುತಗಳನ್ನು ಮರೆಮಾಚಲು ಆರೆಸ್ಸೆಸ್ ವಿಷಯವನ್ನು ಮುಂದಿಟ್ಟುಕೊಂಡು ಜನರ ಗಮನ ಬೇರೆಡೆಗೆ ಸೆಳೆಯುತ್ತಿದೆ ಎಂದು ಛಲವಾದಿ ಆರೋಪಿಸಿದರು. “ಆರೆಸ್ಸೆಸ್ ಒಂದು ದೇಶಭಕ್ತ ಸಂಘಟನೆಯಾಗಿದ್ದು, ದೇಶದ ಪರವಾಗಿ ಕೆಲಸ ಮಾಡುತ್ತದೆ,” ಎಂದು ಅವರು ಒತ್ತಿ ಹೇಳಿದರು.
ಪ್ರಿಯಾಂಕ್ ಖರ್ಗೆಗೆ ಛಲವಾದಿಯಿಂದ ತೀವ್ರ ಟೀಕೆ: ಮೈಸೂರಿನಲ್ಲಿ ಗುಲ್ಬರ್ಗ ಮೂಲದ ಬಾಲಕಿಯೊಬ್ಬಳ ಮೇಲೆ ಆಗಿರುವ ಅತ್ಯಾಚಾರದ ಬಗ್ಗೆ ಮಾತನಾಡಿದ ಛಲವಾದಿ, “ಗುಲ್ಬರ್ಗದ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಈ ಘಟನೆಯ ಬಗ್ಗೆ ತನಿಖೆಗೆ ಭೇಟಿ ನೀಡಿದ್ದಾರಾ? ಬಡವರ ಮೇಲೆ ನಿಮಗೆ ಕರುಣೆ ಇದೆಯೇ?” ಎಂದು ಪ್ರಶ್ನಿಸಿದರು. ಬಿಜಾಪುರದಲ್ಲಿ 9-10 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ, ವಾಡಿಯ ಶಾಲೆಯ ಮೇಲ್ಛಾವಣಿ ಕುಸಿತ, ಲೈಬ್ರೆರಿಯನ್ ಆತ್ಮಹತ್ಯೆ, ಮತ್ತು ನೀರಘಂಟಿಗಳಿಗೆ 23 ತಿಂಗಳಿಂದ ವೇತನ ನೀಡದಿರುವ ವಿಷಯಗಳನ್ನು ಎತ್ತಿ, ಈ ಎಲ್ಲ ವೈಫಲ್ಯಗಳನ್ನು ಮರೆಮಾಚಲು ಆರೆಸ್ಸೆಸ್ ವಿಷಯವನ್ನು ಮುಂದಿಡಲಾಗುತ್ತಿದೆ ಎಂದು ಆರೋಪಿಸಿದರು.
“ಪ್ರಿಯಾಂಕ್ ಖರ್ಗೆ ಅಧಿಕಾರಕ್ಕೆ ಯೋಗ್ಯರಲ್ಲ”: ಸಚಿವ ಪ್ರಿಯಾಂಕ್ ಖರ್ಗೆಯವರನ್ನು ತೀವ್ರವಾಗಿ ಟೀಕಿಸಿದ ಛಲವಾದಿ, “ನೀವು ಸಚಿವ ಸ್ಥಾನವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದೀರಿ. ಜನರನ್ನು ದಾರಿತಪ್ಪಿಸಿ, ಅವರ ಜೀವನದೊಂದಿಗೆ ಆಟವಾಡುತ್ತಿದ್ದೀರಿ. ಅತಿವೃಷ್ಟಿ, ಅನಾವೃಷ್ಟಿಗೆ ಪರಿಹಾರ ಕೊಟ್ಟಿಲ್ಲ, ಗುತ್ತಿಗೆದಾರರಿಗೆ ಹಣ ಕೊಟ್ಟಿಲ್ಲ, 80% ಕಮಿಷನ್ ಆರೋಪಗಳಿವೆ. ಇವೆಲ್ಲವನ್ನೂ ಪರಿಹರಿಸದೆ ಕ್ಷುಲ್ಲಕ ಕಾರಣಗಳಿಂದ ಆರೆಸ್ಸೆಸ್‌ನ್ನು ಗುರಿಯಾಗಿಟ್ಟುಕೊಂಡಿದ್ದೀರಿ,” ಎಂದು ವಾಗ್ದಾಳಿ ನಡೆಸಿದರು. “ಪ್ರಿಯಾಂಕ್ ಖರ್ಗೆ ಹೊಣೆಗೇಡಿಗಳು, ದುರಹಂಕಾರದ ಕಣಜ,” ಎಂದು ಟೀಕಿಸಿದ ಅವರು, ದಲಿತ ಸಮುದಾಯದಿಂದ ಬಂದವರಾದ ಖರ್ಗೆ ದಲಿತರ ಕಲ್ಯಾಣಕ್ಕಾಗಿ ಏನೂ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.