ಬೆಂಗಳೂರು: ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಪಥಸಂಚಲನಕ್ಕೆ ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ಪ್ರಜಾತಂತ್ರದ ವಿಜಯವೆಂದು ಕೊಂಡಾಡಿದ್ದಾರೆ. ಈ ತೀರ್ಪು ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ತಕ್ಕ ಚಾಟಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ವಿಜಯೇಂದ್ರ, “ಚಿತ್ತಾಪುರದಲ್ಲಿ RSS ಪಥಸಂಚಲನವನ್ನು ನಿರ್ಬಂಧಿಸಲು ಹೊರಟ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ತೀರ್ಪು ಮುಖಭಂಗವನ್ನುಂಟು ಮಾಡಿದೆ. ಈ ತೀರ್ಪು ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿ ಆಡಳಿತಕ್ಕೆ ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರಿದೆ. ಸಂವಿಧಾನದ ಬಗ್ಗೆ ಬೊಗಳುವವರಿಗೆ ಈ ತೀರ್ಪು ತಕ್ಕ ಪಾಠವನ್ನು ಕಲಿಸಿದೆ,” ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ.
ಸಾಂಸ್ಕೃತಿಕ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಿಗೆ ಕಾನೂನು ಸುವ್ಯವಸ್ಥೆಯ ಷರತ್ತುಗಳೊಂದಿಗೆ ಅನುಮತಿ ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದಿರುವ ವಿಜಯೇಂದ್ರ, ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಲು ಕಾಂಗ್ರೆಸ್ ಸರ್ಕಾರ ಮಾಡಿರುವ ಪ್ರಯತ್ನವನ್ನು ಸಂವಿಧಾನವೇ ತಡೆದಿದೆ ಎಂದು ಹೇಳಿದ್ದಾರೆ. “ರಾಷ್ಟ್ರಭಕ್ತ ಸಂಘಟನೆಗಳನ್ನು ಮೆಟ್ಟಿ ನಿಲ್ಲುವ ಕಾಂಗ್ರೆಸ್‌ನ ಕುಟಿಲ ನೀತಿಯು ಈ ತೀರ್ಪಿನಿಂದ ನಿಷ್ಕ್ರಿಯಗೊಂಡಿದೆ,” ಎಂದು ಅವರು ತಿಳಿಸಿದ್ದಾರೆ.
ಈ ತೀರ್ಪು ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸುವ ಜೊತೆಗೆ, ರಾಜ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ವಾತಂತ್ರ್ಯವನ್ನು ಒದಗಿಸುವಲ್ಲಿ ನ್ಯಾಯಾಲಯದ ಪಾತ್ರವನ್ನು ಎತ್ತಿಹಿಡಿದಿದೆ.