ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟ ಘಟನೆಯ ಬೆನ್ನಲ್ಲೇ, ಮೃತ ದಿವ್ಯಾಂಶಿಯ ತಾಯಿ ಅಶ್ವಿನಿ ಅವರು ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ತಮ್ಮ ಮಗಳ ಚಿನ್ನದ ಕಿವಿಯೋಲೆ ಹಾಗೂ ಸರ ಕಳುವಾಗಿರುವ ಆರೋಪದಡಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಿವ್ಯಾಂಶಿಯ ತಾಯಿ ಅಶ್ವಿನಿ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ನನ್ನ ಮಗಳ ಕಿವಿಯೋಲೆ ಪೋಸ್ಟ್‌ಮಾರ್ಟಮ್ ಸಂದರ್ಭದಲ್ಲಿ ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಕಾಣೆಯಾಗಿದೆ. ಆ ಕಿವಿಯೋಲೆಯನ್ನು ದಿವ್ಯಾಂಶಿಯ ಮಾವ ಆಕೆಯ ಜನ್ಮದಿನದಂದು ಉಡುಗೊರೆಯಾಗಿ ನೀಡಿದ್ದರು. ಆ ಆಭರಣದೊಂದಿಗೆ ಆಕೆಗೆ ತುಂಬಾ ಭಾವನಾತ್ಮಕ ಸಂಬಂಧವಿತ್ತು. ಒಂದೂವರೆ ವರ್ಷದಿಂದ ಆಕೆ ಆ ಕಿವಿಯೋಲೆಯನ್ನು ಬಿಚ್ಚಿರಲಿಲ್ಲ. ಅದರ ಬೆಲೆ ಎಷ್ಟು ಎಂಬುದು ಮುಖ್ಯವಲ್ಲ, ಆ ಆಭರಣ ನನಗೆ ಬೇಕು ಎಂದು ಆಸ್ಪತ್ರೆಯಲ್ಲಿ ಕೇಳಿದ್ದೇನೆ. ಆದರೆ ಯಾರೂ ಜವಾಬ್ದಾರಿಯಿಂದ ಉತ್ತರಿಸಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಳುವಾದ ಚಿನ್ನಾಭರಣ: ಎಫ್‌ಐಆರ್ ದಾಖಲು
ಕಳುವಾದ ಚಿನ್ನದ ಕಿವಿಯೋಲೆ ಮತ್ತು ಸರದ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ್ದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೃತ ದೇಹವನ್ನು ಶವಾಗಾರಕ್ಕೆ ಕೊಂಡೊಯ್ಯುವಾಗ ಆಭರಣಗಳು ಇದ್ದವು ಎಂದೂ, ಆದರೆ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸುವ ವೇಳೆ ಆಭರಣಗಳು ಕಾಣೆಯಾಗಿದ್ದವು ಎಂದೂ ದೂರಿನಲ್ಲಿ ಆರೋಪಿಸಲಾಗಿದೆ. ಈ ಆಭರಣಗಳಿಗೆ ಭಾವನಾತ್ಮಕ ಮೌಲ್ಯವಿದ್ದು, ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ತಾಯಿಯಿಂದ ಪ್ರಶ್ನೆ
ಘಟನೆಯ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದಿವ್ಯಾಂಶಿಯ ಅಜ್ಜಿಯೊಂದಿಗೆ ಶವಾಗಾರದ ಬಳಿ ಮಾತನಾಡಿ, “ಒಳ್ಳೆಯ ಚಿಕಿತ್ಸೆ ಕೊಡಿಸುತ್ತೇವೆ” ಎಂದು ಭರವಸೆ ನೀಡಿದ್ದರು. ಈ ಸಂಬಂಧ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಸಹಿತ ಪೋಸ್ಟ್ ಮಾಡಿದ್ದರು. ಆದರೆ, ಈ ಬಗ್ಗೆ ದಿವ್ಯಾಂಶಿಯ ತಾಯಿ ಅಶ್ವಿನಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ಮಾರ್ಚರಿಯಲ್ಲಿ ಕುಳಿತುಕೊಂಡು ಚಿಕಿತ್ಸೆಯ ಬಗ್ಗೆ ಮಾತನಾಡುತ್ತಾರೆ. ಮಾರ್ಚರಿಯಲ್ಲಿ ಯಾವ ಚಿಕಿತ್ಸೆ ಕೊಡುತ್ತಾರೆ? ಒಳ್ಳೆಯ ಚಿಕಿತ್ಸೆ ಕೊಡುತ್ತೇವೆ ಎಂದಿದ್ದರು, ಆದರೆ ಈಗ ನನ್ನ ಮಗಳು ಎಲ್ಲಿದ್ದಾಳೆ? ನಿಮ್ಮ ಚಿಕಿತ್ಸೆ ಫೇಲ್ ಆಯಿತಾ, ಅಥವಾ ನಿಮ್ಮ ಹೇಳಿಕೆ ಫೇಲ್ ಆಯಿತಾ?” ಎಂದು ಅವರು ಪ್ರಶ್ನಿಸಿದ್ದಾರೆ.
ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದು, ಆಸ್ಪತ್ರೆಯ ಶವಾಗಾರದಲ್ಲಿ ಆಭರಣ ಕಳುವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಕ್ಕೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.