ಬೆಂಗಳೂರು: “ರಾಜ್ಯದ ಚುನಾವಣೆಯಲ್ಲಿ ಆಗಿರುವ ಅಕ್ರಮ ಮತ್ತು ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಮತ ಮತ್ತು ಹಕ್ಕನ್ನು ರಕ್ಷಿಸಿಕೊಳ್ಳಲು ಕಾರ್ಯಕರ್ತರು ಸಿದ್ಧರಾಗಬೇಕು,” ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಆಗಸ್ಟ್ 5ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಿದ್ಧತೆಗಾಗಿ, ಶಿವಕುಮಾರ್ ಅವರು ಬುಧವಾರ ಭಾರತ ಜೋಡೋ ಭವನದಲ್ಲಿ ಬೆಂಗಳೂರು ವಲಯದ ನಾಯಕರು ಮತ್ತು ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು, “ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಸುವಾಗ ಮತದಾನ, ಮತಗಟ್ಟೆ, ಮತದಾರರ ಪಟ್ಟಿಗಳ ಕುರಿತು ಚರ್ಚೆಯಾಗುತ್ತಿದೆ. ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಅಕ್ರಮದ ಬಗ್ಗೆ ನಾವು ಸಂಶೋಧನೆ ನಡೆಸಿದ್ದೇವೆ. ಬಿಜೆಪಿಯವರು ಚಿಲುಮೆ ಮತ್ತು ಇತರ ಸಂಸ್ಥೆಗಳ ದುರ್ಬಳಕೆ ಮೂಲಕ ಅಕ್ರಮಕ್ಕೆ ಮುಂದಾಗಿದ್ದರು. ಇದನ್ನು ಸಂಪೂರ್ಣ ತಡೆಯಲು ಸಾಧ್ಯವಾಗಲಿಲ್ಲ. ಬಿಜೆಪಿಯವರು ಚುನಾವಣಾ ಆಯೋಗದ ಗುರುತಿನ ಚೀಟಿಗಳನ್ನು ತಮ್ಮ ಕಾರ್ಯಕರ್ತರಿಗೆ ನೀಡಿ, ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಿದ್ದಾರೆ,” ಎಂದು ಆರೋಪಿಸಿದರು.
“ವಿಧಾನಸಭೆ ಚುನಾವಣೆಯ ನಂತರ ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಗೇಶ್ ಅವರ ಪುತ್ರ ನನ್ನನ್ನು ಭೇಟಿಯಾಗಿ ಮಹತ್ವದ ಮಾಹಿತಿ ನೀಡಿದರು. ಆದರೆ ತಡವಾದ ಕಾರಣ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ಲೋಕಸಭೆ ಚುನಾವಣೆಯಲ್ಲೂ ಇದೇ ರೀತಿಯ ಅಕ್ರಮ ನಡೆದಿದ್ದು, ನಮ್ಮ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಇದನ್ನು ಪರಿಶೀಲಿಸಿದ್ದಾರೆ. ಪಕ್ಷದ ವತಿಯಿಂದ ಈ ಅಕ್ರಮಗಳನ್ನು ಅಧ್ಯಯನ ಮಾಡಿ ದೆಹಲಿಗೆ ವರದಿ ಕಳುಹಿಸಿದ್ದೇವೆ,” ಎಂದು ಶಿವಕುಮಾರ್ ತಿಳಿಸಿದರು.
“ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಚುನಾವಣಾ ಅಕ್ರಮಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಈ ವಿಷಯವನ್ನು ಜನರಿಗೆ ಮನವರಿಕೆ ಮಾಡಬೇಕು. ಇದಕ್ಕಾಗಿ ಬಿಎಲ್ಎ (ಬೂತ್ ಲೆವೆಲ್ ಏಜೆಂಟ್) ನೇಮಕಕ್ಕೆ ಕೆಲವು ಎಂಎಲ್‌ಸಿಗಳಿಗೆ ಜವಾಬ್ದಾರಿ ವಹಿಸಿದ್ದೇನೆ. ಕೆಲವರು ಚುನಾವಣೆಯ ನಂತರ ಆಸಕ್ತಿ ತೋರದಿರುವುದು ಗಮನಕ್ಕೆ ಬಂದಿದೆ. ಆಗಸ್ಟ್ 5ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿ ರ್ಯಾಲಿಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಿಗೆ ಸಲಹೆಗಳನ್ನು ಕಳುಹಿಸಿದ್ದೇನೆ,” ಎಂದು ಹೇಳಿದರು.
ಕಾರ್ಯಕರ್ತರ ಸಂಘಟನೆಗೆ ಕರೆ: “ರಾಷ್ಟ್ರೀಯ ನಾಯಕರು ಬಂದಾಗ ಬೆಂಗಳೂರು ನಗರ, ದಕ್ಷಿಣ, ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಮಂಡ್ಯ ಜಿಲ್ಲೆಯ ನಾಯಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹಣ ಕೊಟ್ಟು ಯಾರನ್ನೂ ಕರೆತರಬೇಡಿ. ಕಾರ್ಯಕರ್ತರು, ಮುಖಂಡರು ಮತ್ತು ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಭಾಗವಹಿಸಬೇಕು,” ಎಂದು ಶಿವಕುಮಾರ್ ಕರೆ ನೀಡಿದರು.
ನಿಗಮ-ಮಂಡಳಿ ನೇಮಕ: “ಸರ್ಕಾರ ರಚನೆಯಾದ ನಂತರ ಕಾರ್ಯಕರ್ತರಿಗೆ ಹಲವು ಜವಾಬ್ದಾರಿಗಳನ್ನು ನೀಡಿದ್ದೇವೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ನಿಗಮ-ಮಂಡಳಿಗಳ ನೇಮಕದ ಪಟ್ಟಿ ಬಿಡುಗಡೆಯಾಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಇಬ್ಬರಂತೆ ಸುಮಾರು 700 ಜನರಿಗೆ ಸ್ಥಾನಮಾನ ನೀಡಲಾಗುವುದು. ಉಳಿದ 30 ಜನರಿಗೆ ನಿಗಮ-ಮಂಡಳಿ ಅಥವಾ ಉಪಾಧ್ಯಕ್ಷ ಸ್ಥಾನಗಳನ್ನು ನೀಡಲಾಗುವುದು. ಈ ಪಟ್ಟಿಯನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಕಾರ್ಯಪ್ರವೃತ್ತರಾದವರನ್ನು ಪರಿಶೀಲಿಸಿದ್ದಾರೆ. ನಮ್ಮ ಪಕ್ಷದಲ್ಲಿ ಸುಮಾರು 4-5 ಸಾವಿರ ಜನ ಅರ್ಹತೆ ಹೊಂದಿದ್ದಾರೆ,” ಎಂದು ತಿಳಿಸಿದರು.
ಎಐಸಿಸಿ ಸಭೆ: “ಗುರುವಾರ ಮಧ್ಯಾಹ್ನ 1 ಗಂಟೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಎಂಎಲ್‌ಎ, ಎಂಪಿ ಅಭ್ಯರ್ಥಿಗಳು, ಎಂಎಲ್‌ಸಿಗಳು ಮತ್ತು ವಿವಿಧ ಘಟಕಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಲಿದ್ದಾರೆ. ಎಲ್ಲರಿಗೂ ಜವಾಬ್ದಾರಿ ವಹಿಸಲಾಗುವುದು. ಈ ಹೋರಾಟ ಬಿಹಾರ ಚುನಾವಣೆಗಾಗಿ ಎಂದು ಕೆಲವು ಮಾಧ್ಯಮಗಳು ಹೇಳುತ್ತಿವೆ. ಆದರೆ, ಇದು ನಮ್ಮ ರಾಜ್ಯದಲ್ಲಿ ನಡೆದ ಅಕ್ರಮಗಳ ಬಗ್ಗೆ ಜನರಿಗೆ ತಿಳಿಸಲು. ಮುಖ್ಯಮಂತ್ರಿ ಮತ್ತು ಗೃಹ ಸಚಿವರೊಂದಿಗೆ ಈ ವಿಷಯವನ್ನು ಚರ್ಚಿಸಿದ್ದೇನೆ,” ಎಂದು ಶಿವಕುಮಾರ್ ವಿವರಿಸಿದರು.