ರಾಮನಗರ, ಮೇ 1, 2025 (ಕರ್ನಾಟಕ ವಾರ್ತೆ):
ರಾಮನಗರದ ಅರಳೇಪೇಟೆಯ ಶ್ರೀ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ಶ್ರೀ ಬಸವೇಶ್ವರ ಸೇವಾ ಸಮಿತಿ ಟ್ರಸ್ಟ್ (ರಿ.), ಶ್ರೀ ಬಸವೇಶ್ವರ ಮಹಿಳಾ ಸಂಘ ಹಾಗೂ ವಿವಿಧ ಸಂಘಗಳ ಸಹಯೋಗದೊಂದಿಗೆ ಆಯೋಜಿಸಲಾದ ಜಗಜ್ಯೋತಿ ಶ್ರೀ ಬಸವೇಶ್ವರರ 894ನೇ ಜಯಂತಿ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದರಾದ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಭಾಗವಹಿಸಿ, ಶ್ರೀ ಬಸವೇಶ್ವರರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ದೇವರ ದರ್ಶನ ಪಡೆದರು.
ಸಮಾರಂಭದಲ್ಲಿ ಮಾತನಾಡಿದ ಡಾ. ಮಂಜುನಾಥ್, “ಜಗದ್ಗುರು ಶ್ರೀ ಬಸವೇಶ್ವರರು ಸಾಮಾಜಿಕ ಕ್ರಾಂತಿಯ ಮೂಲಕ ಸಮಾಜಕ್ಕೆ ಸಮಾನತೆಯ ಬೆಳಕು ತೋರಿದ ಮಹಾನ್ ಸುಧಾರಕರು. ಅವರು ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದರು. ಶೋಷಣೆಯಿಲ್ಲದ, ಸಮಾನತೆಯ ಸಮಾಜವನ್ನು ಕಟ್ಟಲು ಜೀವನವಿಡೀ ಶ್ರಮಿಸಿದ ಬಸವಣ್ಣನ ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿದೆ. ಅವರ ಜೀವನ ಮತ್ತು ಸಂದೇಶಗಳು ಎಲ್ಲರಿಗೂ ಸ್ಫೂರ್ತಿಯಾಗಿವೆ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಅಧ್ಯಕ್ಷ ಶ್ರೀ ಶಿವಲಿಂಗಯ್ಯ, ನಗರಸಭಾ ಅಧ್ಯಕ್ಷ ಶ್ರೀ ಶಶಿ, ವೀರಶೈವ ಜಿಲ್ಲಾ ಅಧ್ಯಕ್ಷ ಶ್ರೀ ಯೋಗಾನಂದ, ಬಿಜೆಪಿ ಮುಖಂಡರಾದ ಶ್ರೀ ಶಿವಾನಂದ, ಶ್ರೀ ಪದ್ಮನಾಭ ಸೇರಿದಂತೆ ಹಲವು ಗಣ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮವು ಬಸವ ತತ್ವಗಳನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕೂಡಿತ್ತು.