ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರವನ್ನು ಬೆಂಗಳೂರಿನ ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶಾಸಕ ಸಿ.ಕೆ. ರಾಮಮೂರ್ತಿ ಅವರು ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಪೊಲೀಸ್, ಬೆಸ್ಕಾಂ, ಜಲಮಂಡಳಿ, ಕೊಳಚೆ ನಿರ್ಮೂಲನಾ ಮಂಡಳಿ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಹಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಬುಧವಾರ ನಡೆದ ಸಭೆಯಲ್ಲಿ ಶಾಸಕರು ಮಾತನಾಡಿ, ಬೆಂಗಳೂರಿನ ಮೊದಲ ಸರ್ಕಾರಿ ವಾಣಿಜ್ಯ ಸಂಕೀರ್ಣವಾದ ಜಯನಗರ ವಾಣಿಜ್ಯ ಕಟ್ಟಡವನ್ನು ಸಂಪೂರ್ಣ ಸಂರಕ್ಷಿಸಬೇಕೆಂದು ಒತ್ತಿ ಹೇಳಿದರು. ಇತ್ತೀಚೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಬೆಂಕಿ ಅವಘಡದ ನಂತರ ಈ ಕಟ್ಟಡದ ಸುರಕ್ಷತೆಗೆ ಆದ್ಯತೆ ನೀಡಬೇಕು, ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿ, ಸುತ್ತಮುತ್ತ ‘ನೋ ವೆಂಡಿಂಗ್ ಜೋನ್’ ಘೋಷಿಸಿ, ಅಧಿಕೃತ ಬೀದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ಕಲ್ಪಿಸಬೇಕು ಎಂದು ತಿಳಿಸಿದರು. ತಳಮಹಡಿಯಲ್ಲಿ ಮಳೆನೀರು ತುಂಬುವ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ವೃತ್ತಿಪರ ಹೌಸ್‌ಕೀಪಿಂಗ್ ವ್ಯವಸ್ಥೆ ಜಾರಿಗೊಳಿಸುವಂತೆಯೂ ಸೂಚಿಸಿದರು.
ಬಿ ಖಾತಾ to ಎ ಖಾತಾ: ಸರ್ಕಾರದ ಗಡುವಿನೊಳಗೆ ಜನರಿಗೆ ತೊಂದರೆಯಾಗದಂತೆ ಖಾತಾ ಮೇಳ ಆಯೋಜಿಸಿ, ಬಿ ಖಾತಾ ಆಸ್ತಿಗಳನ್ನು ಎ ಖಾತಾಕ್ಕೆ ಬದಲಾಯಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಶಾಸಕರು ಆದೇಶಿಸಿದರು.
ರಸ್ತೆ ಕಾಮಗಾರಿಯಲ್ಲಿ ಸಮನ್ವಯ: ಜಯನಗರದ ಪ್ರಮುಖ ರಸ್ತೆಗಳಲ್ಲಿ ಡಾಂಬರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಇತರ ಇಲಾಖೆಗಳು ರಸ್ತೆ ಅಗೆತ ಮಾಡಿದ್ದಲ್ಲಿ ತಕ್ಷಣ ಪೂರ್ಣಗೊಳಿಸಿ, ವೈಜ್ಞಾನಿಕವಾಗಿ ರಸ್ತೆ ಮುಚ್ಚಬೇಕು ಮತ್ತು ಎಲ್ಲ ಇಲಾಖೆಗಳ ನಡುವೆ ಸಂಪೂರ್ಣ ಸಮನ್ವಯತೆ ಕಾಯ್ದುಕೊಳ್ಳಬೇಕು ಎಂದು ತಾಕೀತು ಮಾಡಿದರು.
ಕಸ ವಿಲೇವಾರಿ ಸುಧಾರಣೆ: ಕೇವಲ ದಂಡದ ಭಯದಿಂದಲ್ಲ, ರಸ್ತೆ ಮೂಲೆಗಳಲ್ಲಿ ಕಸದ ಬುಟ್ಟಿಗಳನ್ನು ಅಳವಡಿಸಿ, ಮಾರುಕಟ್ಟೆ ಪ್ರದೇಶದಲ್ಲಿ ರಾತ್ರಿ ಪಾಳಿಯಲ್ಲಿಯೂ ಕಾಂಪ್ಯಾಕ್ಟರ್‌ಗಳನ್ನು ನಿಯೋಜಿಸಿ ಕಸ ವಿಲೇವಾರಿ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸೂಚಿಸಿದರು.
ಒತ್ತುವರಿ ತೆರವು: ಗುರುಪ್ಪನಪಾಳ್ಯ, ತಿಲಕ್‌ನಗರ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗ ಹಾಗೂ ಬುಲೆವರ್ಡ್ ರಸ್ತೆಯಲ್ಲಿರುವ ಪಾಲಿಕೆ ಆಸ್ತಿಗಳ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಬೇಕು.
ಶಾಲೆ-ಕಾಲೇಜು ಬಳಿ ಬೀಡಿ-ಸಿಗರೇಟ್ ಅಂಗಡಿ ಸ್ಥಳಾಂತರ: ಶೈಕ್ಷಣಿಕ ಸಂಸ್ಥೆಗಳ ೧೦೦ ಮೀಟರ್ ವ್ಯಾಪ್ತಿಯಲ್ಲಿರುವ ಬೀಡಿ-ಸಿಗರೇಟ್ ಅಂಗಡಿಗಳನ್ನು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಮುಚ್ಚಿಸಿ ಸ್ಥಳಾಂತರ ಮಾಡಬೇಕು.
ಅನೈತಿಕ ಚಟುವಟಿಕೆಗಳ ನಿಯಂತ್ರಣ: ಕ್ಷೇತ್ರದಲ್ಲಿ ಹುಡುಗರು ತೊಡಗಿಕೊಂಡಿರುವ ಅನೈತಿಕ ಚಟುವಟಿಕೆಗಳನ್ನು ತಡೆಯಲು ಪೊಲೀಸರು ಗಸ್ತು ಹೆಚ್ಚಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಶಾಸಕರು ಆದೇಶ ನೀಡಿದರು.
ಈ ಎಲ್ಲ ಸೂಚನೆಗಳನ್ನು ತಕ್ಷಣ ಅನುಷ್ಠಾನಕ್ಕೆ ತಂದು ವರದಿ ಸಲ್ಲಿಸುವಂತೆ ಪಾಲಿಕೆ ಆಯುಕ್ತ ಕೆ.ಟಿ. ರಮೇಶ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಆಯುಕ್ತರಾದ ನವೀನ್ ಕುಮಾರ್ ರಾಜು, ರಾಚಪ್ಪ, ಜಂಟಿ ಆಯುಕ್ತೆ ಮಧು ಎನ್.ಎನ್. ಮತ್ತು ಎಲ್ಲ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.











