ಬೆಂಗಳೂರು: ಭಾರತೀಯ ರೇಷ್ಮೆ ರಫ್ತು ಪ್ರಚಾರ ಮಂಡಳಿ (ಐ.ಎಸ್.ಇ.ಪಿ.ಸಿ), ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿ.ಜಿ.ಎಫ್.ಟಿ) ಮತ್ತು ಕೇಂದ್ರ ರೇಷ್ಮೆ ಮಂಡಳಿ (ಸಿ.ಎಸ್.ಬಿ) ಸಹಯೋಗದೊಂದಿಗೆ ಇಂದು ಬೆಂಗಳೂರಿನಲ್ಲಿ “ರಫ್ತುಗಳಿಗಾಗಿ ಸಂಪರ್ಕ ಕಾರ್ಯ – ಮುಂದಿನ ಹಾದಿ” ಎಂಬ ಒಂದು ದಿನದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಐ.ಎಸ್.ಇ.ಪಿ.ಸಿ ಅಧ್ಯಕ್ಷ ಡಾ. ಬಿಮಲ್ ಮಾವಂಡಿಯಾ, “ಬೆಂಗಳೂರು ರೇಷ್ಮೆಯ ಗುಣಮಟ್ಟಕ್ಕೆ ಜಾಗತಿಕವಾಗಿ ಹೆಸರುವಾಸಿಯಾಗಿದೆ. ಈ ಬಲವಾದ ಸಾಮರ್ಥ್ಯವನ್ನು ಬಳಸಿಕೊಂಡು ರಫ್ತನ್ನು ಗಣನೀಯವಾಗಿ ಹೆಚ್ಚಿಸಬೇಕು. ಉತ್ಪನ್ನದ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಿ ಜಾಗತಿಕ ಖರೀದಿದಾರರ ವಿಶ್ವಾಸವನ್ನು ಬಲಪಡಿಸಬೇಕು” ಎಂದು ಒತ್ತಾಯಿಸಿದರು. ಅವರು ಮುಂಬರುವ ಡಿಜಿಟಲ್ ನಿಯೋಗ ಮತ್ತು ಸಮಗ್ರ ರೇಷ್ಮೆ ಕೈಪಿಡಿಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.
ಜವಳಿ ಸಚಿವಾಲಯದ ಐಟಿಎಸ್ ವ್ಯಾಪಾರ ಸಲಹೆಗಾರ ಶ್ರೀ ಬಿಪಿನ್ ಮೆನನ್, ರೇಷ್ಮೆ ಹಾಗೂ ಜವಳಿ ಕ್ಷೇತ್ರದ ರಫ್ತು ಸಾಮರ್ಥ್ಯದ ಬಗ್ಗೆ ಮಾತನಾಡಿ, ಸಹಾಯಕ ನೀತಿಗಳು, ಮಾರುಕಟ್ಟೆ ಪ್ರವೇಶ ಉಪಕ್ರಮಗಳು ಮತ್ತು ಉದ್ಯಮ ಸಮಾಲೋಚನೆಗಳ ಮೂಲಕ ಸರ್ಕಾರ ಅನುಕೂಲಕರ ವಾತಾವರಣ ನಿರ್ಮಿಸುತ್ತಿದೆ ಎಂದು ತಿಳಿಸಿದರು. ಉದ್ಯಮಿಗಳು ನಾವೀನ್ಯತೆ ಅಳವಡಿಸಿಕೊಂಡು, ಅಂತಾರಾಷ್ಟ್ರೀಯ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳನ್ನು ವೈವಿಧ್ಯಗೊಳಿಸಬೇಕು ಎಂದು ಕರೆ ನೀಡಿದರು.

ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀ ಪಿ. ಶಿವಕುಮಾರ್, ರೇಷ್ಮೆ ವಲಯದಲ್ಲಿ ಭಾರತದ ಸ್ಥಿರ ಬೆಳವಣಿಗೆಯನ್ನು ಎತ್ತಿ ತೋರಿಸಿದರು. ಸಂಶೋಧನೆ, ತಂತ್ರಜ್ಞಾನ, ರೈತ-ಕೇಂದ್ರಿತ ಕಾರ್ಯಕ್ರಮಗಳ ಮೂಲಕ ಆತ್ಮನಿರ್ಭರ ಭಾರತದ ಕಡೆಗೆ ದೇಶ ಮುನ್ನಡೆಯುತ್ತಿದೆ ಎಂದು ಹೇಳಿದರು. ಆಯೋಜಿತ ಭಾರತ್ ಟೆಕ್ಸ್-2026 ಕಾರ್ಯಕ್ರಮದಲ್ಲಿ ರೇಷ್ಮೆ ಉದ್ಯಮಿಗಳು ಕಡ್ಡಾಯವಾಗಿ ಭಾಗವಹಿಸಬೇಕೆಂದು ಆಹ್ವಾನಿಸಿದರು.
ಸಿಲ್ಕ್ ಮಾರ್ಕ್ ಆರ್ಗನೈಸೇಶನ್‌ನ ಸಿಇಒ ಡಾ. ನರೇಶ್ ಬಾಬು ಎನ್., ಮೌಲ್ಯ ಸರಪಳಿ ಬಲವರ್ಧನೆ, ಕ್ಲಸ್ಟರ್ ಅಭಿವೃದ್ಧಿ, ತಂತ್ರಜ್ಞಾನ ಪ್ರಸರಣ ಮತ್ತು ಸುಸ್ಥಿರ ಕೌಶಲ್ಯ ಅಭಿವೃದ್ಧಿಯ ಮಹತ್ವವನ್ನು ವಿವರಿಸಿದರು. ಜವಳಿ ಸಚಿವ ಶ್ರೀ ಗಿರಿರಾಜ್ ಸಿಂಗ್ ಅವರು ಪ್ರಾರಂಭಿಸಿದ “ಮೇರಾ ರೇಷಮ್ ಮೇರಾ ಅಭಿಮಾನ” (MRMA) ಅಭಿಯಾನದ ಬಗ್ಗೆಯೂ ಉಲ್ಲೇಖಿಸಿದರು.
ಡಿ.ಜಿ.ಎಫ್.ಟಿ ಬೆಂಗಳೂರು ಪ್ರಾದೇಶಿಕ ಮುಖ್ಯಸ್ಥೆ ಡೋನಾ ಘೋಷ್, ರಫ್ತು ಸುಗಮತೆಗೆ ಡಿ.ಜಿ.ಎಫ್.ಟಿ ಒದಗಿಸುತ್ತಿರುವ ಡಿಜಿಟಲ್ ವೇದಿಕೆಗಳು ಮತ್ತು ಯೋಜನೆಗಳನ್ನು ಪರಿಚಯಿಸಿದರು. ಉದಯೋನ್ಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ರೇಷ್ಮೆಗೆ ದೊಡ್ಡ ಅವಕಾಶಗಳಿವೆ ಎಂದು ತಿಳಿಸಿದರು.

ಐಎಸ್‌ಇಸಿ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ. ಮಾಲಿನಿ ಎಲ್. ತಂತ್ರಿ, ರೇಷ್ಮೆ ಕ್ಲಸ್ಟರ್‌ಗಳ ಆರ್ಥಿಕ ಮಹತ್ವ, ಸಣ್ಣ-ಅತಿ ಸಣ್ಣ ಉದ್ಯಮಗಳ ಬೆಳವಣಿಗೆ ಮತ್ತು ಮೌಲ್ಯ ಸರಪಳಿ ಬಲಪಡಿಸುವ ಅಗತ್ಯತೆಯ ಬಗ್ಗೆ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ರಫ್ತು ಕಾರ್ಯವಿಧಾನಗಳು, ಸರ್ಕಾರಿ ಯೋಜನೆಗಳು, ಉತ್ಪನ್ನ ವೈವಿಧ್ಯೀಕರಣ ಹಾಗೂ ಜಾಗತಿಕ ಮಾರುಕಟ್ಟೆ ಬೇಡಿಕೆಗಳ ಕುರಿತು ಸಂವಾದಾತ್ಮಕ ಚರ್ಚೆ ನಡೆಯಿತು. ರೇಷ್ಮೆ ಉದ್ಯಮಿಗಳು ಐ.ಎಸ್.ಇ.ಪಿ.ಸಿ, ಡಿ.ಜಿ.ಎಫ್.ಟಿ ಮತ್ತು ಸಿ.ಎಸ್.ಬಿ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಿ ರಫ್ತು ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಎಲ್ಲ ಪಾಲುದಾರರು ಒತ್ತಾಯಿಸಿದರು.
(ಪಿಐಬಿ ಬೆಂಗಳೂರು)











