ಬೆಂಗಳೂರು: ಜಾತಿಗಣತಿ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕುತಂತ್ರವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆಸುತ್ತಿತ್ತು ಎಂಬ ಆರೋಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಜನಗಣತಿಯ ಜೊತೆ ಜಾತಿಗಣತಿ ನಡೆಸುವ ಮಹತ್ವದ ನಿರ್ಧಾರವನ್ನು ಕೇಂದ್ರದ ಮೋದಿ ಸರಕಾರ ಕೈಗೊಂಡಿರುವುದು ಸ್ವಾಗತಾರ್ಹ. 1931ರ ನಂತರ ಭಾರತದಲ್ಲಿ ಈ ರೀತಿ ಜಾತಿಗಣತಿ ನಡೆದಿಲ್ಲ. ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಜೀ ಈ ನಿರ್ಧಾರ ತೆಗೆದುಕೊಂಡಿದ್ದಾರೆ,” ಎಂದರು.
ವಿಜಯೇಂದ್ರ ಅವರು ಸಿದ್ದರಾಮಯ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿ, “ರಾಜ್ಯ ಸರ್ಕಾರ ಹಿಂದುಳಿದ ಸಮುದಾಯಗಳ ಸಮೀಕ್ಷೆಯ ಹೆಸರಿನಲ್ಲಿ ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಹಳೆಯ ಸಮೀಕ್ಷೆಯ ವರದಿಯೇ ಇಲ್ಲದಿದ್ದರೂ ‘ಜಾತಿಗಣತಿ’ ಎಂದು ಘೋಷಿಸಿರುವುದು ಜನರಲ್ಲಿ ಗೊಂದಲ ಉಂಟುಮಾಡಲು ಮಾತ್ರ,” ಎಂದು ಹೇಳಿದರು.
ಅವರು ಮುಂದಾಗಿ, “ಕಾಂತರಾಜು ವರದಿಯ ಪ್ರತಿಯೇ ಸರ್ಕಾರದ ಬಳಿ ಇಲ್ಲ. ಕಾಂಗ್ರೆಸ್ ಈವರೆಗೂ ಜಾತಿಗಣತಿ ಕುರಿತು ಸ್ಪಷ್ಟತೆ ನೀಡಿಲ್ಲ. ಇದೀಗ ಕೇಂದ್ರದ ನಿರ್ಧಾರಕ್ಕೆ ಚಿಂತೆಗೊಂಡಿದೆ. ಪ್ರಧಾನಿಯವರ ಉದ್ದೇಶ ಎಲ್ಲ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂಬದು. ಅದನ್ನು ಕಾಂಗ್ರೆಸ್ರಿಂದ ಕಲಿಯುವ ಅಗತ್ಯವಿಲ್ಲ,” ಎಂದು ತಿಳಿಸಿದರು.
ಪೆಹಲ್ಗಾಂನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, “ಈ ವಿಷಯದಲ್ಲಿ ಪ್ರತಿಯೊಬ್ಬ ಭಾರತೀಯನು ಒಟ್ಟಾಗಿ ನಿಲ್ಲುತ್ತಾನೆ. ಭಯೋತ್ಪಾದನೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂಬ ಬೇಡಿಕೆ ಜನತೆಯಲ್ಲಿದೆ. ಕೆಲವು ಜನರು ಪ್ರಚಾರದ ಹುಚ್ಚಿನಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ,” ಎಂದು ಅಭಿಪ್ರಾಯಪಟ್ಟರು.