ಬೆಂಗಳೂರು: “ಜಾತಿಗಣತಿ ಕುರಿತು ಕೆಲ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದು, ಅವರಿಗೆ ತಕ್ಕ ಉತ್ತರ ನೀಡಲಾಗುತ್ತದೆ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಕನ್ನಡಟಕದ 11ನೇ ಹಿಂದುಳಿದ ವರ್ಗಗಳ ಆಯೋಗದ ಜಾತಿಗಣತಿ ವರದಿ ಕುರಿತಂತೆ ಮಂಗಳವಾರ ಅವರು ಬೆಂಗಳೂರಿನ ಕುಮಾರಪಾರ್ಕ್‌ನಲ್ಲಿ ವಿಧಾನ ಪರಿಷತ್ ಸದಸ್ಯರು, ಸಚಿವರು, ಶಾಸಕರು ಮತ್ತು ಮುಖಂಡರೊಂದಿಗೆ ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, “ಈ ವರದಿಯನ್ನು ಇತ್ತೀಚೆಗೆ ಸಚಿವ ಸಂಪುಟದಲ್ಲಿ ಮಂಡಿಸಲಾಗಿದೆ. ವರದಿ ಕುರಿತಂತೆ ಇದೇ 17ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದರು.
ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಅಗತ್ಯ
“ಮಾಧ್ಯಮಗಳಲ್ಲಿ ವಿವಿಧ ರೀತಿಯ ವರದಿಗಳು ಪ್ರಕಟವಾಗುತ್ತಿದ್ದು, ನಾಯಕರು ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಜನರಿಗೆ ಸರಿಯಾದ ಮಾಹಿತಿ ನೀಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಶಾಸಕರಿಗೆ ವರದಿಯ ಸಾರಾಂಶವನ್ನು ಸ್ಪಷ್ಟಪಡಿಸಲಾಗುತ್ತಿದೆ. ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ” ಎಂದು ಶಿವಕುಮಾರ್ ಹೇಳಿದರು.
ಆಧಾರಭುತ ಅಧ್ಯಯನದ ವರದಿ
“ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಅಧ್ಯಯನ ನಡೆಸಲು ಸರ್ಕಾರವೇ ತೀರ್ಮಾನಿಸಿ, ಈ ಸಲುವಾಗಿ ಕೋಟ್ಯಂತರ ರೂಪಾಯಿ ವೆಚ್ಚವಹಿಸಿ ಸಮೀಕ್ಷೆ ನಡೆಸಿದೆ. ಆಯೋಗ ರಾಜ್ಯದ ವಿವಿಧೆಡೆ ಭೇಟಿಗಳು ನೀಡಿ, ಆಧಾರಭುತ ಮಾಹಿತಿ ಸಂಗ್ರಹಿಸಿ ವರದಿ ನೀಡಿದೆ. ಶಾಸಕರು ಹೆಚ್ಚಿನ ಮಾಹಿತಿ ಕೇಳಿರುವ ಹಿನ್ನೆಲೆಯಲ್ಲಿ, ಅವರಿಗೆ ವರದಿಯ ಪ್ರತಿ ಒದಗಿಸಲಾಗಿದೆ” ಎಂದರು.
ಆಫ್ ದ ರೆಕಾರ್ಡ್ ಹೇಳಿಕೆಗಳಿಗೆ ತೆರೆ
“ಮಾಧ್ಯಮಗಳಲ್ಲಿ ಸತ್ಯವಿಲ್ಲದಂತೆ ವರದಿಗಳು ಪ್ರಕಟವಾಗಿವೆ. ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿಿದ್ದಾರೆ ಎಂಬಂತ ವರದಿ ಸಹ ಪ್ರಕಟವಾಗಿದೆ. ಈ ಎಲ್ಲ ವಿಚಾರಗಳನ್ನು ನಾವು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಕೆಲವರು ಆಫ್ ದ ರೆಕಾರ್ಡ್ ಹೇಳಿಕೆಗಳನ್ನು ನೀಡಿರಬಹುದು. ಅದಕ್ಕೆ ನಾವು ತೆರೆ ಎಳೆಯುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದರು.
ಎಲ್ಲರಿಗೂ ನ್ಯಾಯ, ಎಲ್ಲರ ರಕ್ಷಣೆ
“ನಾವು ಒಂದೇ ಒಂದು ಸಮಾಜದ ಬಗ್ಗೆ ಚಿಂತಿಸುವುದಿಲ್ಲ. ಎಲ್ಲ ವರ್ಗಗಳ ಪ್ರತಿನಿಧಿಗಳಿಂದ ಸಲಹೆ ಪಡೆಯುತ್ತಿದ್ದೇವೆ. ನಾನು ಕಾಂಗ್ರೆಸ್ ಅಧ್ಯಕ್ಷನಾಗಿದ್ದೂ, ಇನ್ನೂ ಕೆಲವರು ಸಚಿವರಾಗಿದ್ದೂ, ಎಲ್ಲ ಸಮುದಾಯಗಳ ರಕ್ಷಣೆಯು ನಮ್ಮ ಕರ್ತವ್ಯವಾಗಿದೆ. ಅದರ ಅನುಸಾರವೇ ನಾವು ಕೆಲಸ ಮಾಡುತ್ತಿದ್ದೇವೆ” ಎಂದು ಡಿಸಿಎಂ ಹೇಳಿದರು.
ಮಾಹಿತಿ ಕೊರತೆಯಿಂದ ಹಿಂದೆ ವಿರೋಧ
ಜಾತಿಗಣತಿ ಕುರಿತಾಗಿ ಹಿಂದಿನ ದಿನಗಳಲ್ಲಿ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದ್ದನ್ನು ಕುರಿತು ಪ್ರತಿಕ್ರಿಯಿಸಿದ ಅವರು, “ಆಗ ವರದಿ ಕುರಿತು ಯಾರಿಗೂ ಸಂಪೂರ್ಣ ಮಾಹಿತಿ ಲಭ್ಯವಿರಲಿಲ್ಲ. ವರದಿ ಬಹಿರಂಗವಾಗಿದ್ದು ಮೂರು ದಿನಗಳ ಹಿಂದೆ ಮಾತ್ರ. ಈಗ ಮಾಹಿತಿಯನ್ನು ಶಾಸಕರೊಂದಿಗೆ ಹಂಚಿಕೊಳ್ಳುವುದು ಹಾಗೂ ಅವರ ಸಲಹೆಗಳನ್ನು ಪಡೆಯುವುದು ನಮ್ಮ ಜವಾಬ್ದಾರಿ” ಎಂದು ತಿಳಿಸಿದ್ದಾರೆ.












